ADVERTISEMENT

ಜಾಲಹಳ್ಳಿ:‌ ನೂತನ ಶಾಲಾ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ಮ್ಯಾಕಲದೊಡ್ಡಿ: ಶಿಥಿಲಗೊಂಡ ಶಾಲೆಯಲ್ಲಿ ನಡೆಯುತ್ತಿದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಅಲಿಬಾಬಾ ಪಟೇಲ್
Published 2 ಮಾರ್ಚ್ 2024, 6:02 IST
Last Updated 2 ಮಾರ್ಚ್ 2024, 6:02 IST
ಮ್ಯಾಕಲದೊಡ್ಡಿ ಗ್ರಾಮದಲ್ಲಿ ನಿರ್ಮಿಸಲಾದ ಹೊಸ ಕಟ್ಟಡ
ಮ್ಯಾಕಲದೊಡ್ಡಿ ಗ್ರಾಮದಲ್ಲಿ ನಿರ್ಮಿಸಲಾದ ಹೊಸ ಕಟ್ಟಡ   

ಜಾಲಹಳ್ಳಿ:‌ ಸಮೀಪದ ಮ್ಯಾಕಲದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಥಿಲಗೊಂಡ ಕಟ್ಟಡದಲ್ಲಿ ಕಲಿಯುವಂತಾಗಿದೆ.

ಇಲ್ಲಿ 1 ರಿಂದ 7ನೇ ತರಗತಿವರೆಗೆ ತರಗತಿಗಳು ನಡೆಯುತ್ತವೆ. ಒಟ್ಟು 117 ವಿದ್ಯಾರ್ಥಿಗಳಿದ್ದಾರೆ. 6 ಮಂಜೂರಾತಿ ಶಿಕ್ಷಕ ಹುದ್ದೆಗಳಿವೆ. ನಾಲ್ವರು ಕಾಯಂ ಶಿಕ್ಷಕರಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಗ್ರಾಮದಲ್ಲಿಯೇ ಹಳೆ ಕಟ್ಟಡ ಇದೆ. ಅದರಲ್ಲಿ ಮೂರು ಕೋಣೆಗಳಿವೆ. ಅವೂ ಶಿಥಿಲಗೊಂಡಿವೆ. ಅದರಲ್ಲಿಯೇ ಬೋಧನೆ ಮಾಡಲಾಗುತ್ತಿದೆ.

ಗ್ರಾಮದ ಬಳಿಯ ಸರ್ಕಾರಿ ಜಮೀನಿನಲ್ಲಿ 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹48 ಲಕ್ಷ ಅನುದಾನದಲ್ಲಿ ನಾಲ್ಕು ಕೋಣೆಗಳಿರುವ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ADVERTISEMENT

ಗ್ರಾಮಸ್ಥರ ಒತ್ತಾಯದ ಮೇರೆಗೆ ಅದೇ ಯೋಜನೆಯಡಿ ಇನ್ನೂ ಎರಡು ಕೋಣೆಗಳ ನಿರ್ಮಾಣಕ್ಕೆ ₹35‌ ಲಕ್ಷ ಮಂಜೂರು ಮಾಡಲಾಗಿದೆ. ಪೂರ್ಣಗೊಂಡ ನೂತನ ಕಟ್ಟಡವನ್ನು ಕಳೆದ ಮೂರು ತಿಂಗಳ ಹಿಂದೆಯೇ ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.

ಕಟ್ಟಡದ ಜಮೀನು ಸವಳು-ಜವಳಾಗಿದ್ದು, ತಗ್ಗು ಪ್ರದೇಶದಲ್ಲಿ ನಿವೇಶ ಇರುವುದರಿಂದ ಮಳೆ ನೀರು ಸಂಗ್ರಹವಾಗುತ್ತದೆ. ಅಲ್ಲದೆ, ಶಾಲೆ ಸಮೀಪದಲ್ಲಿಯೇ ಹಳೆ ಬಾವಿ ಇದೆ. ಕಟ್ಟಡದ ಸೂತ್ತ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಬಿಸಿಯೂಟದ ಕೋಣೆ, ಶೌಚಾಲಯ, ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಬಾಕಿ ಇರುವುದರಿಂದ ಎಸ್‌ಡಿಎಂಸಿ ಅಧ್ಯಕ್ಷರೂ ಸೇರಿ ಮಕ್ಕಳ ಪಾಲಕರು ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕ್ಷೇತ್ರದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹಳೆ ಕಟ್ಟಡದಲ್ಲಿ ಕಲಿಯುತ್ತಿರುವ ಮಕ್ಕಳು
ಗ್ರಾಮದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ ಈ ಕಟ್ಟಡ ಇದೆ. ಮೂಲ ಸೌಕರ್ಯ ಒದಗಿಸಲು ತಕ್ರಮ ಕೈಗೊಳ್ಳಲಾಗುವುದು. ಶಾಲಾ ಕಟ್ಟಡದ ಸುತ್ತ ರಕ್ಷಣಾ ಗೋಡೆ ನಿರ್ಮಾಣ ಹಾಗೂ ಉಳಿದ ಕಾಮಗಾರಿ ಪೂರ್ಣಗೊಳಿಸಿದ ತಕ್ಷಣ ಕಟ್ಟಡ ಉದ್ಘಾಟನೆ ಮಾಡಲಾಗುವುದು
–ಸುಖದೇವ, ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.