ಮಾನ್ವಿ: ಪಟ್ಟಣದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ‘ವೃತ್ತಿ ವೈಭವ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ’ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು.
ದಶಕಗಳ ನಂತರ ವಿದ್ಯೆ ಕಲಿಸಿದ್ದ ಗುರುಗಳು ಹಾಗೂ ಬಾಲ್ಯದ ಗೆಳೆಯ, ಗೆಳತಿಯರೊಂದಿಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮುಖಾಮುಖಿಯಾದರು. ಬಾಲ್ಯದ ಖುಷಿಯ ಕ್ಷಣಗಳನ್ನು ಸ್ಮರಿಸುವುದಕ್ಕೆ ಹಾಗೂ ಸದ್ಯದ ಬದುಕಿನ ಕುರಿತು ಪರಸ್ಪರ ಕುಶಲೋಪರಿಗೆ ಈ ಕಾರ್ಯಕ್ರಮ ವೇದಿಕೆ ಕಲ್ಪಿಸಿತು.
ಮಾನ್ವಿ ಕಲ್ಮಠದ ವಿದ್ಯಾಸಂಸ್ಥೆಯಲ್ಲಿ ಬೇರುಬಿಟ್ಟು ಈಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು, ಎಲ್ಲರೂ ಒಟ್ಟಾಗಿ ಸೇರಿ ಮತ್ತೊಮ್ಮೆ ಅವಿಸ್ಮರಣೀಯ ಕ್ಷಣಗಳನ್ನು ತುಂಬಿಕೊಂಡರು.ಶಿಷ್ಯಂದಿರ ಸಾಧನೆ ಕಂಡು ಬೆರಗಾದ ಸಂಸ್ಥೆಯ ಶಿಕ್ಷಕರು, ಇದು ವೃತ್ತಿ ಬದುಕಿನ ಸಾರ್ಥಕ ಭಾವ ಎಂದು ಮನಸಾರೆ ಹೇಳಿದರು. ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿದ ಎಲ್ಲಾ ಗುರುಗಳನ್ನು ಸನ್ಮಾನಿಸಿ, ಅವರ ಪಾದಗಳಿಗೆ ನಮಸ್ಕರಿಸಿದ ಹಳೆಯ ವಿದ್ಯಾರ್ಥಿಗಳು ಗುರು–ಶಿಷ್ಯ ಪರಂಪರೆಯ ಮಹತ್ವವನ್ನು ಹೆಚ್ಚಿಸಿದರು.
ನಾಡಿನ ಹಲವು ಮಠಮಾನ್ಯಗಳಂತೆ ಮಾನ್ವಿಯ ಪುರಾತನ ಕಲ್ಮಠವೂ ಸಹ ನಾಲ್ಕು ದಶಕಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ.ಶೈಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿ ಹೊಂದಿರುವ ಈ ಭಾಗದಲ್ಲಿ ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಶೈಕ್ಷಣಿಕ ಸೇವೆ ಗಮನಾರ್ಹ. 80ರ ದಶಕದ ಆರಂಭದಲ್ಲಿ ಅವರು ಸ್ಥಾಪಿಸಿದ ಕಲ್ಮಠ ವಿದ್ಯಾಸಂಸ್ಥೆ ಅಡಿಯಲ್ಲಿ ಪ್ರಸ್ತುತ ಪ್ರಾಥಮಿಕ ಶಾಲಾ ಹಂತದಿಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನವರೆಗೆ ವಿವಿಧ ವೃತ್ತಿಪರ ಕೋರ್ಸ್‌ಗಳ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಈ ಸಂಸ್ಥೆಗಳಲ್ಲಿ ವಿದ್ಯೆ ಪಡೆದಿರುವವರು ವೈದ್ಯರಾಗಿ, ಎಂಜಿನಿಯರುಗಳಾಗಿ ದೇಶ, ವಿದೇಶಗಳಲ್ಲಿ ನೆಲೆಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ/ಅರೆ ಸರ್ಕಾರಿ, ಸ್ವಯಂ ಉದ್ಯೋಗ, ಸ್ವಂತ ಉದ್ಯಮ, ಪತ್ರಿಕೋದ್ಯಮ, ಕಾರ್ಪೋರೆಟ್ ಸಂಸ್ಥೆಗಳ ನೌಕರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೂ ಕೆಲವರು ರಾಜಕೀಯ, ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಂಸ್ಥೆಯಲ್ಲಿ ಕೆಲವು ವರ್ಷಗಳ ಮಟ್ಟಿಗೆ ಸೇವೆ ಸಲ್ಲಿಸಿದ್ದ ಅನೇಕ ಶಿಕ್ಷಕರು ಹಾಗೂ ಉಪನ್ಯಾಸಕರು ಸರ್ಕಾರದ ಉನ್ನತ ನೌಕರಿಗಳಿಗೆ ನೇಮಕಗೊಂಡಿದ್ದಾರೆ.
ವೃತ್ತಿ ವೈಭವ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪ್ರಯುಕ್ತ ‘ಶಿಕ್ಷಣಕ್ಕಾಗಿ ಓಟ’ ಮ್ಯಾರಥಾನ್ ಆಯೋಜಿಸಲಾಗಿತ್ತು. ಶಿಕ್ಷಣ ಮತ್ತು ಸಾಮಾಜಿಕ ಬದ್ಧತೆಯನ್ನು ಸಂಸ್ಥೆಯು ಈ ಮೂಲಕ ಬಿಂಬಿಸಿತು.
ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಶಹಾಪುರದ ವಿಶ್ವಕರ್ಮ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಸಿಪಿಐ ದತ್ತಾತ್ರೇಯ ಕರ್ನಾಡ್, ಸಿರಗುಪ್ಪದ ಸಂತೋಷ ಸಾಮ್ರಾಟ್ ಸೇರಿದಂತೆ ಸ್ಥಳೀಯ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.