ಮಸ್ಕಿ: ನೀತಿ ಅಯೋಗದ ಮಹತ್ವಾಂಕ್ಷಿ ತಾಲ್ಲೂಕು ಕಾರ್ಯಕ್ರಮದಲ್ಲಿ ತೋರಿದ ಸುಧಾರಣೆಗಾಗಿ ಮಸ್ಕಿ ತಾಲ್ಲೂಕು ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಗುರುವಾರ ನೀತಿ ಆಯೋಗ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಶ್ರೇಯಾಂಕದ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತೆಲಂಗಾಣದ ನರಣೂರು ಪಡೆದುಕೊಂಡಿದೆ. ಮಸ್ಕಿ ತಾಲ್ಲೂಕಿಗೆ ಪ್ರೋತ್ಸಾಹ ಧನವಾಗಿ ನೀತಿ ಆಯೋಗ ₹1.50 ಕೋಟಿ ವಿಶೇಷ ಅನುಧಾನ ಘೋಷಣೆ ಮಾಡಿದೆ.
ಆರೋಗ್ಯ ಮತ್ತು ಪೋಷಣೆ, ಅಪೌಷ್ಟಿಕತೆ ನಿವಾರಣೆ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು ಸೇರಿದಂತೆ ಐದು ವಲಯಗಳಲ್ಲಿ 40 ಸೂಚಕಗಳು ಇದ್ದು ಇದರ ಸಂಪೂರ್ಣ ಪ್ರಗತಿ ವರದಿಯನ್ನು ಎಬಿಪಿ ಅಡಿ ಇರುವ 500 ಮಹತ್ವಾಕಾಂಕ್ಷಿ ತಾಲ್ಲೂಕುಗಳು ನೀತಿ ಆಯೋಗಕ್ಕೆ ವರದಿ ಸಲ್ಲಿಸಿದ್ದವು.
‘ಮಸ್ಕಿ ತಾಲ್ಲೂಕು ಸಿದ್ದಪಡಿಸಿದ ಎಸ್‌ಡಬ್ಲೂಟಿಪಿ ಮಾದರಿ ಅರ್ಜಿಯಲ್ಲಿ ಈ ತಾಲ್ಲೂಕಿನಲ್ಲಿ ಆರೋಗ್ಯ, ಅಪೌಷ್ಟಿಕತೆ ನಿವಾರಣೆ, ಶಿಕ್ಷಣ, ಕೃಷಿ ಮತ್ತುಸಂಬಂಧಿತ ಸೇವೆಗಳ ಅಭಿವೃದ್ಧಿ ಕುರಿತು ಸಲ್ಲಿಸಿದ ವರದಿಯ ಬಗ್ಗೆ ನೀತಿ ಆಯೋಗ ಪ್ರಶಂಸೆ ವ್ಯಕ್ತಪಡಿಸಿದೆ. ಜಿಲ್ಲಾಧಿಕಾರಿಗಳ ಖಾತೆಗೆ ₹1.50 ಕೋಟಿ ಪ್ರೋತ್ಸಹ ಧನ ಜಮೆಯಾಗಲಿದ್ದು ಮಸ್ಕಿ ಬ್ಲಾಕ್‌ನ್ನು ನೀತಿ ಆಯೋಗದ ಮಾರ್ಗಸೂಚಿ ಪ್ರಕಾರ ಅಭಿವೃದ್ಧಿ ಪಡೆಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.