ADVERTISEMENT

ಜೋಳ ಖರೀದಿ ಹಣ ಜಮಾ ಮಾಡದಿದ್ದರೆ ಶಾಸಕರ ನಿವಾಸದ ಎದುರು ಧರಣಿ: ಅಮೀನ್‍ಪಾಷಾ

ಕ್ವಿಂಟಲ್‍ಗೆ ₹2 ಲಂಚದ ಬೇಡಿಕೆ: ಅಮೀನ್‌ಪಾಷಾ ದಿದ್ದಿಗಿ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:16 IST
Last Updated 22 ಜೂನ್ 2024, 14:16 IST
ಅಮೀನ್‍ಪಾಷಾ ದಿದ್ದಿಗಿ
ಅಮೀನ್‍ಪಾಷಾ ದಿದ್ದಿಗಿ   

ಸಿಂಧನೂರು: ‘ಖರೀದಿ ಕೇಂದ್ರಗಳ ಮೂಲಕ ಖರೀದಿಸಿರುವ ಜೋಳದ ಹಣವನ್ನು ನಾಲ್ಕು ತಿಂಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಹಾಕಿಲ್ಲ. ಅಲ್ಲದೆ ತಾರತಮ್ಯ ಅನುಸರಿಸಲಾಗುತ್ತಿದೆ. ಎಂಟು ದಿನಗಳ ಒಳಗಾಗಿ ಹಣ ಹಾಕದಿದ್ದರೆ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಎದುರು ಧರಣಿ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಸಂಚಾಲಕ ಅಮೀನ್‍ಪಾಷಾ ದಿದ್ದಿಗಿ ಎಚ್ಚರಿಕೆ ನೀಡಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಜೋಳ ಖರೀದಿ ಕೇಂದ್ರಗಳಿದ್ದು, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಶಿವಬಸಪ್ಪ ಕ್ವಿಂಟಲ್‍ಗೆ ₹2 ಕೊಟ್ಟರೆ ಮಾತ್ರ ರೈತರ ಖಾತೆಗೆ ಹಣ ಹಾಕುತ್ತಿದ್ದಾರೆ. ಲಂಚ ಕೊಡದ ತಾಲ್ಲೂಕಿನ ಆರ್.ಎಚ್.ಕ್ಯಾಂಪ್-2, ದಿದ್ದಿಗಿ, ಬಾದರ್ಲಿ, ಹುಡಾ, ಗುಡದೂರು ಸೊಸೈಟಿಗಳ ರೈತರ ಖಾತೆಗೆ ಇಲ್ಲಿಯವರೆಗೂ ಹಣ ಜಮಾ ಮಾಡಿಲ್ಲ. ರೈತರ ಉತ್ಪಾದನಾ ಕೇಂದ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ. ಹಣ ಪಾವತಿ ಕುರಿತು ಕೇಳಿದರೆ ಸಚಿವರು, ಜಿಲ್ಲಾಧಿಕಾರಿ ಹೀಗೆ ಯಾರ ಬಳಿಯಾದರೂ ಹೋಗಿ ತಿಳಿಸಿ ಎಂದು ರಾಜಾರೋಷವಾಗಿ ಹೇಳುತ್ತಿರುವುದ್ದಾರೆ. ಹಾಗಾದರೆ ರೈತರು ಯಾರನ್ನು ಕೇಳಬೇಕು’ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ 7.50 ಲಕ್ಷ ಕ್ವಿಂಟಲ್ ಜೋಳ ಖರೀದಿಯಾಗಿದೆ ಎಂದು ತಿಳಿದುಬಂದಿದೆ. ಬೆಳೆಹಾನಿ, ಬರಗಾಲದಿಂದ ಅಷ್ಟೊಂದು ಜೋಳ ನಮ್ಮ ತಾಲ್ಲೂಕಿನಲ್ಲಿ ಬೆಳೆದಿಲ್ಲ. ವರ್ತಕರು ಬೇರೆ ಬೇರೆ ಜಿಲ್ಲೆಗಳ ಜೋಳವನ್ನು ನಮ್ಮಲ್ಲಿ ತಂದು ಖರೀದಿ ನಡೆಸಿದ್ದಾರೆ. ಇದರ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಿಲ್ಲ. ಆದರೆ ನಮ್ಮ ಸಂಘಟನೆಯಿಂದ ಎಪಿಎಂಸಿಯಲ್ಲಿ ಅನಧಿಕೃತ ಜೋಳ ಖರೀದಿಸಿದ ಲಾರಿಗಳನ್ನು ಹಿಡಿದು ದೂರು ದಾಖಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಬರ ಪರಿಹಾರಕ್ಕೆ ಪಾವತಿಸಿದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿರುವ ಬ್ಯಾಂಕ್ ವ್ಯವಸ್ಥಾಪಕರ ಧೋರಣೆ ಖಂಡನಾರ್ಹ’ ಎಂದು ದೂರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ, ಮುಖಂಡರಾದ ಅಣ್ಣಪ್ಪ ಜಾಲಿಹಾಳ, ಯೂಸೂಫ್‍ಸಾಬ ಕುನ್ನಟಗಿ, ಇಸ್ಮಾಯಿಲ್, ವೀರೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.