ಕವಿತಾಳ: ಮಸ್ಕಿ ತಾಲ್ಲೂಕಿನ ಪರಸಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗ್ರಾಮದ ಸಮುದಾಯ ಭವನದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು, ಮಕ್ಕಳು ಇಲಿ–ಹೆಗ್ಗಣಗಳ ಕಾಟ ಎದುರಿಸುವಂತಾಗಿದೆ.
ಸಮುದಾಯ ಭವನದಲ್ಲಿ ದೇವಸ್ಥಾನದ ದೊಡ್ಡ ಪಾತ್ರೆಗಳು ಸೇರಿದಂತೆ ಅಡುಗೆ ಸಾಮಾನುಗಳು ಮತ್ತು ಸಿಮೆಂಟ್ ಚೀಲ ತಂದಿರಿಸಲಾಗಿದೆ. ಇನ್ನುಳಿದ ಕಿಷ್ಕಿಂದೆಯಂಥ ಇಕ್ಕಟ್ಟಾದ ಜಾಗದಲ್ಲಿಯೇ ಪುಟಾಣಿಗಳನ್ನು ಕೂರಿಸಲಾಗುತ್ತಿದೆ.
ಸಮುದಾಯ ಭವನದ ನೆಲಹಾಸು ಕಿತ್ತುಹೋದ ಪರಿಣಾಮ ಇಲಿ, ಹೆಗ್ಗಣ, ಹಾವು, ಚೇಳು ವಿಷ ಜಂತುಗಳ ಆತಂಕ ಕಾಡುತ್ತಿದೆ. ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸುವ ಬಹುತೇಕ ಪಾಲಕರು ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಕೂಡ ಹಿಂದೇಟು ಹಾಕುತ್ತಿದ್ದಾರೆ.
‘20 ಮಕ್ಕಳು ನಿತ್ಯ ಅಂಗನವಾಡಿ ಕೇಂದ್ರಕ್ಕೆ ಬರುತ್ತಾರೆ. ಒಂದೆಡೆ ಆಹಾರ ಸಾಮಗ್ರಿಗಳು, ದೇವಸ್ಥಾನದ ಪಾತ್ರೆಗಳನ್ನು ಇಟ್ಟಿರುವ ಕಾರಣ ಮಕ್ಕಳಿಗೆ ಕುಳಿತುಕೊಳ್ಳಲು ಹೆಚ್ಚಿನ ಜಾಗವಿಲ್ಲ. ಇನ್ನೊಂದೆಡೆ ಇಲಿ ಹೆಗ್ಗಣಗಳ ಕಾಟಕ್ಕೆ ಮಕ್ಕಳು ಭಯಪಡುತ್ತಾರೆ. ಆಹಾರ ಧಾನ್ಯ, ಮೊಟ್ಟೆಗಳೆಲ್ಲ ಹಾಳಾಗುತ್ತಿವೆ’ ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಳಲುತೋಡಿಕೊಂಡರು.
ಹತ್ತು ವರ್ಷಗಳಾದರೂ ಮುಗಿದಿಲ್ಲ!:
ಗ್ರಾಮದಲ್ಲಿದ್ದ ಅಂಗನವಾಡಿಯ ಹಳೇ ಕಟ್ಟಡವನ್ನು 2012-13ರಲ್ಲಿ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಅದಾಗಿ ಹತ್ತು ವರ್ಷ ಕಳೆದರೂ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
‘ಅಂದಿನ ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ನನಗೆ ಕೆಲಸ ವಹಿಸಿ ಮೂರು ಹಂತದಲ್ಲಿ ಹಣ ಪಾವತಿಸುವ ಭರವಸೆ ನೀಡಿದ್ದರು. ಇದುವರೆಗೆ ಕೇವಲ ₹1.05 ಲಕ್ಷ ಮಾತ್ರ ಬಿಲ್ ಪಾವತಿಯಾಗಿದೆ. ಈಗ ಅವರು ಮೃತಪಟ್ಟಿದ್ದು ನಾನು ಖರ್ಚು ಮಾಡಿದ ಹಣ ಯಾರು ಕೊಡುತ್ತಾರೆ’ ಎಂದು ಕಾಮಗಾರಿಯ ಉಪ ಗುತ್ತಿಗೆದಾರ ಲಕ್ಷ್ಮಣ ಪ್ರಶ್ನಿಸುತಾರೆ.
‘ಈ ಗೊಂದಲಗಳ ನಡುವೆ ಹೊಸದಾಗಿ ಕಟ್ಟಡ ನಿರ್ಮಿಸಿಲು ಮೂರು ಬಾರಿ ಅನುದಾನ ನೀಡಲಾಗಿದೆ. ಆದರೆ ಉಪ ಗುತ್ತಿಗೆದಾರನ ಆಕ್ಷೇಪದಿಂದ ಅನುದಾನ ವಾಪಸ್ ಹೋಗಿದೆ’ ಎಂದು ಜನರು ದೂರುತ್ತಾರೆ.
‘ಶಾಲಾ ಕೊಠಡಿ ನೀಡುವಂತೆ ಡಿಡಿಪಿಐ ಅವರ ಜತೆ ಮಾತನಾಡುತ್ತೇನೆ ಅಲ್ಲಿ ಅವಕಾಶ ಸಿಗದಿದ್ದರೆ ಬಾಡಿಗೆ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಿಸಲಾಗುವುದು’ಎಂ.ಎನ್.ಚೇತನಕುಮಾರ, ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.