ಮಂತ್ರಾಲಯದಲ್ಲಿ ರಾಯಚೂರು ಮಾರ್ಗದಲ್ಲಿ ಆರು ಎಕರೆ ಪ್ರದೇಶದಲ್ಲಿ 33 ಅಡಿ ಎತ್ತರದ ಶ್ರೀಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪಿಸುವ ಯೋಜನೆ ರೂಪಿಸಲಾಗಿದೆ.
ರಾಘವೇಂದ್ರ ಮಠವು ಈ ಉದ್ದೇಶಕ್ಕಾಗಿಯೇ ಶ್ರೀ ಸತ್ಯಸಾಯಿ ಜಿಲ್ಲೆಯ ರೊಳ್ಳ ಮಂಡಲದ ಕೊಡಗರ್ಲಗುಟ್ಟ ಪ್ರದೇಶದಿಂದ ಬೃಹತ್ ಏಕಶಿಲೆಯನ್ನು ಖರೀದಿಸಿ ವಿಶೇಷ ವಾಹನದ ಮೂಲಕ ಪ್ರತಿಮೆ ಸ್ಥಾಪಿಸುವ ಸ್ಥಳಕ್ಕೆ ಶಿಲೆಯನ್ನು ತಂದಿರಿಸಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಉದ್ಘಾಟನೆ ವೇಳೆಗೆ ಮಂತ್ರಾಲಯದ ಶ್ರೀರಾಮನ ಬೃಹತ್ ಮೂರ್ತಿ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಲಾಗಿದೆ. ಹೀಗಾಗಿ ಶಿಲಾಮೂರ್ತಿ ಕೆತ್ತನೆ ಕಾರ್ಯ ಭರದಿಂದ ಸಾಗಿದೆ.
‘ಶ್ರೀಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪಿಸುವ ವಿಶೇಷ ಯೋಜನೆ ಅಂದಾಜು ₹ 6 ಕೋಟಿ ವೆಚ್ಚದ್ದಾಗಿದೆ’ ಎಂದು ಮಂತ್ರಾಲಯ ಮಠದ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥರು ಹೇಳುತ್ತಾರೆ.
ಡಿಜಿಟಲ್ ತಂತ್ರಜ್ಞಾನ ಬಳಸಿ ಕೆತ್ತನೆ ಕಾರ್ಯ ಆರಂಭಿಸುವ ಹೊಣೆಯನ್ನು ಕರಾವಳಿ ಭಾಗದ ತಜ್ಞರ ತಂಡಕ್ಕೆ ನೀಡಲಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಥೆಯು 9 ಅಡಿ ಪ್ರತಿಮೆಯನ್ನು ಸಿದ್ಧಪಡಿಸಿತ್ತು. ಅದೇ ವಿನ್ಯಾಸದಲ್ಲೇ ಶಿಲಾಮೂರ್ತಿ ಕೆತ್ತಲು ಮಠಾಧೀಶರು ಅನುಮೋದಿಸಿದ್ದು, ಕೆತ್ತನೆ ಕಾರ್ಯ ಭರದಿಂದ ಸಾಗಿದೆ.
10 ಶಿಲ್ಪಿಗಳು ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದು, ಅರ್ಧದಷ್ಟು ಕೆಲಸ ಆಗಿದೆ. ಶಿಲಾಮೂರ್ತಿಯ ಹಿಂಭಾಗದ ಕೆತ್ತನೆ ಕೆಲಸ ಬಾಕಿ ಇದೆ ಎಂದು ಆಂಧ್ರಪ್ರದೇಶದ ಕುಪ್ಪಂನ ಶಿಲ್ಪಿ ರವಿ ಹೇಳುತ್ತಾರೆ.
2021ರ ಮಾರ್ಚ್ 14ರಂದು ಮಂತ್ರಾಲಯದ ಮುಖ್ಯದ್ವಾರದ ಸಮೀಪ 32 ಅಡಿ ಎತ್ತರದ ಏಕಶಿಲಾ ಅಭಯಾಂಜನೇಯ ಸ್ವಾಮಿ ಮೂರ್ತಿ ಸ್ಥಾಪಿಸಲಾಗಿದೆ. ಇದರ ಸಮೀಪದಲ್ಲೇ ಶ್ರೀಅಭಯರಾಮನ 33 ಅಡಿ ಎತ್ತರದ ಶಿಲಾಮೂರ್ತಿ ಅನಾವರಣಗೊಳ್ಳಲಿದೆ.
ಮಂತ್ರಾಲಯಕ್ಕೆ ಈಗಾಗಲೇ ನಿತ್ಯ ಸಾವಿರಾರು ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ. ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿ ದೇಣಿಗೆಯೂ ಹರಿದು ಬರುತ್ತಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶ್ರೀಗಳು ಕ್ಷೇತ್ರಕ್ಕೆ ಇನ್ನಷ್ಟು ಆಧ್ಮಾತ್ಮಿಕ ಸ್ಪರ್ಶ ನೀಡಲು ಮಂದಾಗಿದ್ದಾರೆ. ಮಂತ್ರಾಲಯವನ್ನು ಧಾರ್ಮಿಕವಾಗಿ ಇನ್ನಷ್ಟು ಸಮೃದ್ಧಗೊಳಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.