ADVERTISEMENT

ಸಿಂಧನೂರು ನಗರಸಭೆ | ಮೊಮ್ಮಗನ ಏಟಿಗೆ, ಅಜ್ಜನ ತಿರುಗೇಟು!

ನಗರಸಭೆ ನಾಮನಿರ್ದೇಶಿತ ಸದಸ್ಯರ ನೇಮಕ: ಮೇಲುಗೈ ಸಾಧಿಸಿದ ಹಂಪನಗೌಡ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:29 IST
Last Updated 23 ಅಕ್ಟೋಬರ್ 2024, 15:29 IST
ಗರೀಬ್‍ಪಾಷ
ಗರೀಬ್‍ಪಾಷ   

ಸಿಂಧನೂರು: ಇಲ್ಲಿನ ನಗರಸಭೆಗೆ ತಮ್ಮ ಬೆಂಬಲಿಗರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯ ಸರ್ಕಾರದಿಂದ ನೇಮಕ ಮಾಡಿಸುವಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ವಿಧಾನ ಪರಿಷತ್‌ ಸದಸ್ಯ ಬಸನಗೌಡ ಬಾದರ್ಲಿ ಎದುರು ಮೇಲುಗೈ ಸಾಧಿಸಿದ್ದಾರೆ.

ಬಸನಗೌಡ ಬಾದರ್ಲಿ ತಮ್ಮ ಬೆಂಬಲಿಗರಾದ ಶಿವುಕುಮಾರ ಜವಳಿ, ಶರಣಯ್ಯಸ್ವಾಮಿ ಕೋಟೆ, ಹಬೀಬ್, ಹನುಮಂತ ಕರ್ನಿ ಹಾಗೂ ಖಾಜಾಹುಸೇನ್ ಅವರನ್ನು ನಗರಸಭೆಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ 2024ರ ಆಗಸ್ಟ್ 6ರಂದು ಪತ್ರ ಬರೆದಿದ್ದರು. ನಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಈ ಐವರ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದು ಸೂಚಿಸಿದ್ದರು.

ಈ ಪತ್ರ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಹರಿದಾಡಿತ್ತು. ಇದರಿಂದ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಅವರ ಬೆಂಬಲಿಗರು ಮುಜುಗರ ಎದುರಿಸಿದ್ದರು. ಬಳಿಕ ಹಂಪನಗೌಡ ಬಾದರ್ಲಿ ಅವರು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರನ್ನು ಭೇಟಿ ಮಾಡಿ ಅಸಮಾಧಾನ ಹೊರಹಾಕಿದ್ದರು. 

ADVERTISEMENT

ಇದರ ಬೆನ್ನಲ್ಲೇ ಹಂಪನಗೌಡ ಅವರ ಬೆಂಬಲಿಗರಾದ ಗರೀಬ್‍ಪಾಷಾ, ನಾಗರಾಜ ಕವಿತಾಳ, ಅಯೂಬ್‍ಖಾನ್, ಸಂಗೀತಾ ಸಾರಂಗಮಠ ಹಾಗೂ ಮಲ್ಲಿಕಾರ್ಜುನ ಮಾಲಿಪಾಟೀಲ ಅವರ ಹೆಸರನ್ನು ನಗರಸಭೆಗೆ ನಾಮನಿರ್ದೇಶನ ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ವರಸೆಯಲ್ಲಿ ಅಜ್ಜ–ಮೊಮ್ಮಗ:

ಒಂದೆಡೆ ಶಾಸಕ ಹಂಪನಗೌಡ ಬಾದರ್ಲಿ ಅವರ ಅಕ್ಕ ಲಕ್ಷ್ಮಿದೇವಿ ಅವರ ಮಗಳ ಮಗ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ. ಮತ್ತೊಂದೆಡೆ ಹಂಪನಗೌಡರ ಅಣ್ಣನ ಮಗನ ಹೆಂಡತಿ ಬಸನಗೌಡರ ಚಿಕ್ಕಮ್ಮ. ಈ ಎರಡೂ ವರಸೆಗಳಿಂದ ಹಂಪನಗೌಡ ಹಾಗೂ ಬಸನಗೌಡ ಅವರು ಅಜ್ಜ–ಮೊಮ್ಮಗ ಆಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.