ADVERTISEMENT

ರಾಯಚೂರು | ₹19 ಲಕ್ಷ ಮೌಲ್ಯದ ಅಕ್ಕಿ ಮೂಟೆಯೊಂದಿಗೆ ಪರಾರಿಯಾಗಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:25 IST
Last Updated 23 ಜುಲೈ 2024, 16:25 IST
ರಾಯಚೂರು ತಾಲ್ಲೂಕಿನ ಯರಗೇರಾ ಪೊಲೀಸರು ಅಕ್ಕಿ ಲಾರಿಯನ್ನು ವಶಪಡಿಸಿಕೊಂಡಿರುವುದು
ರಾಯಚೂರು ತಾಲ್ಲೂಕಿನ ಯರಗೇರಾ ಪೊಲೀಸರು ಅಕ್ಕಿ ಲಾರಿಯನ್ನು ವಶಪಡಿಸಿಕೊಂಡಿರುವುದು   

ರಾಯಚೂರು: ಲಾರಿಯೊಂದರಲ್ಲಿ ₹19.77 ಲಕ್ಷ ಮೌಲ್ಯದ 1200 ಅಕ್ಕಿ ಚೀಲಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸದೇ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಯರಗೇರಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಯಚೂರು-ಗದ್ವಾಲ್ ರಸ್ತೆ ಹಾಗೂ ಚಿಕ್ಕಸುಗೂರು ಗ್ರಾಮದ ಸಮೀಪದಲ್ಲಿರುವ ಎಂಆರ್‌ಎನ್ ಅಗ್ರೋ ಇಂಡಸ್ಟ್ರೀಸ್, ಪೂರ್ಣಸಾಯಿ, ಅನ್ನಪೂರ್ಣ, ಎಸ್‌ಎಲ್‌ಎನ್ ರೈಸ್ ಮಿಲ್‌ಗಳ 25 ಕೆ.ಜಿಯ ₹19.77 ಲಕ್ಷ  ಮೌಲ್ಯದ 1200 ಅಕ್ಕಿ ಚೀಲಗಳನ್ನು ಲಾರಿಯಲ್ಲಿ ತುಂಬಿಕೊಂಡು ಜೂನ್ 26ರಂದು  ಮೈಸೂರು ಹಾಗೂ ಮಳವಳ್ಳಿಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ, ಮೈಸೂರು ಹಾಗೂ ಮಳವಳ್ಳಿಯಲ್ಲಿ ಅಕ್ಕಿಚೀಲಗಳನ್ನು ಇಳಿಸದೇ ಆರೋಪಿಗಳಾದ ಲಾರಿ ಚಾಲಕ ಮಂಜುನಾಥ ಜಿಗರಿ, ಕ್ಲೀನರ್ ಪರಶುರಾಮ ದಾದಾಪುರ ಪರಾರಿಯಾಗಿದ್ದರು.

ಆರೋಪಿಗಳಿಂದ ₹16 ಲಕ್ಷ ಮೌಲ್ಯದ 975 ಅಕ್ಕಿ ಚೀಲಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ₹20 ಲಕ್ಷ ಮೌಲ್ಯದ ಲಾರಿ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ADVERTISEMENT

ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳಾದ ಕೆ.ಎಂ ಪ್ರಕಾಶ ದಾವಣಗೆರೆ, ಇಸ್ಮಾಯಿಲ್ ಖಾನ್ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯರಗೇರಾ ಸಿಪಿಐ ನಿಂಗಪ್ಪ ಎನ್.ಆರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಅರುಣಕುಮಾರ ರಾಥೋಡ್, ಶಾಂತಮ್ಮ, ಅವಿನಾಶ ಕಾಂಬ್ಳೆ, ಇಡಪನೂರು ಎಎಸ್‌ಐ ರಂಗಣ್ಣ ಹಾಗೂ ಸಿಬ್ಬಂದಿ ಆದೇಶ, ಚಾಂದಪಾಷಾ, ಹನುಮಗೌಡ ಅವರನ್ನು ಒಳಗೊಂಡ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.