ADVERTISEMENT

ಕಾನ್‌ಸ್ಟೆಬಲ್ ಮೇಲೆ ಶಾಸಕಿ ಕರೆಮ್ಮ ಪುತ್ರನಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 20:03 IST
Last Updated 11 ಫೆಬ್ರುವರಿ 2024, 20:03 IST
   

ದೇವದುರ್ಗ (ರಾಯಚೂರು ಜಿಲ್ಲೆ): ಪಟ್ಟಣದ ಪೋಲಿಸ್ ಠಾಣೆಯ ಕರ್ತವ್ಯನಿರತ‌ ಹೆಡ್ ಕಾನ್‌ಸ್ಟೆಬಲ್ ಮೇಲೆ‌ ಜೆಡಿಎಸ್ ಶಾಸಕಿ ಕರೆಮ್ಮ ಜೆ. ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮರಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾಸ್ ಸೇರಿ 15ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೆಡ್ ಕಾನ್‌ಸ್ಟೆಬಲ್ ಹನುಮಂತರಾಯ ಆರೋಪಿಸಿದ್ದಾರೆ.

ಹನುಮಂತರಾಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ತಾಲ್ಲೂಕಿನ ದೊಂಡಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ADVERTISEMENT

ಭಾನುವಾರ ಶಾಸಕಿ ಕರೆಮ್ಮ ಅವರ ಪುತ್ರ ಹಾಗೂ ಆಪ್ತ ಸಹಾಯಕ ಪ್ರವಾಸಿ ಮಂದಿರಕ್ಕೆ ಬರುವಂತೆ ಕರೆ ಮಾಡಿದ್ದರಿಂದ ಪ್ರವಾಸಿ ಮಂದಿರಕ್ಕೆ ಹೋದೆ ಎಂದು ಹಲ್ಲೆಗೊಳಗಾದ ಹನುಮಂತರಾಯ ತಿಳಿಸಿದ್ದಾರೆ.

ದೊಂಡಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಬೀಟ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರೇಮಾ ಹಾಗೂ ಅಲ್ಲಾಬಕ್ಷ್ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಇರುವುದು ಘಟನೆಗೆ ಕಾರಣ ಎನ್ನುವ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಕೆಲ ಬಿಜೆಪಿ ಮುಖಂಡರು, ‘ಪೊಲೀಸರಿಗೆ ಈ ಪರಿಸ್ಥಿತಿ ಬಂದಿದೆ. ತಾಲ್ಲೂಕಿನ ಜನ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ’ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ ಸದಲಗಿ ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.