ADVERTISEMENT

ವಿಧಾನಸಭಾ ಚುನಾವಣೆ: ತಾಲ್ಲೂಕು ಕೇಂದ್ರ ರಚನೆ ಭರವಸೆ ನೀಡುತ್ತಿರುವ ರಾಜಕಾರಣಿಗಳು

ಶರಣ ಪ್ಪ ಆನೆಹೊಸೂರು
Published 1 ಫೆಬ್ರುವರಿ 2023, 6:14 IST
Last Updated 1 ಫೆಬ್ರುವರಿ 2023, 6:14 IST
ಮುದಗಲ್‌ ಕೋಟೆ
ಮುದಗಲ್‌ ಕೋಟೆ   

ಮುದಗಲ್: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಮುದಗಲ್‌ ಹೋಬಳಿಯನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ.

ನೂತನ ತಾಲ್ಲೂಕು ಘೋಷಣೆಗೆ ಈ ಭಾಗದ ಜನ ನಾಲ್ಕು ದಶಕಗಳಿಂದ ಕಾಯುತ್ತಿದ್ದಾರೆ.

ಮುದಗಲ್‌ ಹೋಬಳಿ 1952 ರಿಂದ 2008 ರವರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 2008 ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ವೇಳೆ ಲಿಂಗಸುಗೂರು ಕ್ಷೇತ್ರಕ್ಕೆ ಸೇರಿಸಲಾಯಿತು.

ADVERTISEMENT

ಈ ಹೋಬಳಿಯವರು ವಿವಿಧ ಕೇತ್ರಗಳನ್ನು ಪ್ರತಿನಿಧಿಸಿ ಗೆದ್ದು ಶಾಸಕರು, ಸಚಿವರಾಗಿದ್ದಾರೆ. ಆದರೆ ಮುದಗಲ್‌ ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸಲು ಯಾರೂ ಮನಸ್ಸು ಮಾಡಿಲ್ಲ ಎಂಬುದು ಜನರ ನೋವಿಗೆ ಕಾರಣ.

ಇಲ್ಲಿ ಅಂಥ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳಿಲ್ಲ. ಕಲ್ಲುಕ್ವಾರಿ ಬಿಟ್ಟರೆ ಜನತೆಗೆ ಕೆಲಸ ನೀಡುವ ಉದ್ಯಮಗಳಿಲ್ಲ. ರೈತರು ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಆದ್ದರಿಂದ ಇದು ಹಿಂದುಳಿದ ಹೋಬಳಿಯಾಗಿಯೇ ಉಳಿದಿದೆ.

ಮುದಗಲ್‌ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಕುಷ್ಟಗಿ ಕ್ಷೇತ್ರದಿಂದ ಶಾಸಕರಾಗಿದ್ದ ಮಾಜಿ ಶಾಸಕ ಎಂ.ಗಂಗಣ್ಣ ಅವರ ನೇತೃತ್ವದಲ್ಲಿ ಅನೇಕ ಹಿರಿಯರು ಹೋರಾಟ ಪ್ರಾರಂಭಿಸಿದ್ದರು. ಆದರೆ ಆ ಹೋರಾಟಕ್ಕೆ ಅಂಥ ಯಶಸ್ಸು ಸಿಗಲಿಲ್ಲ. ದಶಕದ ಹಿಂದೆ ಹೊಸ ತಲೆಮಾರಿನ ಯುವಜನತೆ ಮತ್ತೆ ತಾಲ್ಲೂಕು ರಚನೆಗಾಗಿ ನೂತನ ತಾಲ್ಲೂಕು ರಚನಾ ಹೋರಾಟ ಸಮಿತಿ ರಚಿಸಿ ಹೋರಾಟ ಪ್ರಾರಂಭಿಸಿದೆ. ಇವರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಡಿ.ಎಸ್.ಎಸ್‌ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ಮುದಗಲ್ ಪಟ್ಟಣಕ್ಕೆ ತಾಲ್ಲೂಕು ಘೋಷಣೆಗೆ ಇರಬೇಕಾದ ಎಲ್ಲ ಅರ್ಹತೆಗಳೂ ಇವೆ. ಭೌಗೋಳಿಕವಾಗಿ ದೊಡ್ಡದಾಗಿದೆ. ಈಗಾಗಲೇ ಇಲ್ಲಿ ಅನೇಕ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಎಪಿಎಂಸಿ, ಉಪ ತಹಶೀಲ್ದಾರ್‌, ರೈತ ಸಂಪರ್ಕ ಕೇಂದ್ರ ಹಾಗೂ ಖಜಾನೆ ಇಲಾಖೆ ಕಚೇರಿಗಳು ಇಲ್ಲಿವೆ.

ಕೃಷ್ಣಾ ನದಿ ಹತ್ತಿರದಲ್ಲಿದ್ದರೂ ಈ ಹೋಬಳಿ ನೀರಾವರಿಯಿಂದ ವಂಚಿತವಾಗಿದೆ. ಅಭಿವೃದ್ಧಿಯಾ ಗಬೇಕಾದರೆ ತಾಲ್ಲೂಕು ಘೋಷಣೆ ಮಾಡಬೇಕು ಎಂದು ಜನ ಒತ್ತಾಯಿಸುತ್ತಾರೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸಿದ್ದು ರಾಜಕಾರಣಿಗಳು ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುದಗಲ್‌ ಉತ್ಸವ ಮಾಡುತ್ತೇವೆ ಹಾಗೂ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ.

ಈಚೆಗೆ ಪಟ್ಟಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ನಾನು ಅಧಿಕಾರಕ್ಕೆ ಬಂದರೆ ಮುದಗಲ್‌ ಅನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಘೋಷಣೆ ಮಾಡಿದರು. ಆದ್ದರಿಂದ ಚುನಾವಣೆಯ ನಂತರವಾದರೂ ಜನರ ಕನಸು ನನಸಾಗಲಿದೆಯೇ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.