ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ವ್ಯಾಪ್ತಿಯ ಗೋಲಪಲ್ಲಿ ಬಳಿ ಮಂಗಳವಾರ ಬೆಳಗಿನ ಜಾವ ದರೋಡೆಕೋರರ ಗುಂಪೊಂದು ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್ ಸೇರಿ 30 ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ವಾಹನಗಳನ್ನು ನಿಲ್ಲಿಸಲು ಯತ್ನಿಸಿದೆ.
ಬೀದರ್, ಔರಾದ್, ಚಿತ್ತಾಪುರ ಹಾಗೂ ಕಲಬುರಗಿ ಕಡೆಯಿಂದ ಬಂದು ಬಳ್ಳಾರಿಗೆ ತೆರಳುತ್ತಿದ್ದ ವಾಹನಗಳ ಮೇಲೆ ನಿರ್ಜನ ಪ್ರದೇಶದಲ್ಲಿ ದರೋಡೆಕೋರರು ಕಲ್ಲು ತೂರಾಟ ಮಾಡಿ ವಾಹನಗಳನ್ನು ತಡೆಯಲು ಪ್ರಯತ್ನಿಸಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತಲೆಗೆ ಗಾಯವಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಸ್ತೆ ಸಾರಿಗೆ ಸಂಸ್ಥೆಯ ಲಿಂಗಸುಗೂರು ಘಟಕದ ಅಧಿಕಾರಿಗಳು ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ‘ದರೋಡೆಕೋರರು ಗುರುಗುಂಟಾ ಮಾರ್ಗವಾಗಿ ಸಾಗುವ 20 ಬಸ್‌ಗಳ ಮೇಲೆ ಕಲ್ಲು ತೂರಿದ್ದಾರೆ. ಬಸ್‌ಗಳ ಚಾಲಕರು ಸ್ಥಳದಲ್ಲಿ ನಿಲ್ಲಿಸಿದ್ದರೆ ದರೋಡೆಕೋರರು ಲೂಟಿ ಮಾಡುವ ಸಾಧ್ಯತೆ ಇತ್ತು. ಈ ಕುರಿತು ಚಾಲಕರಿಂದ ನಿಖರವಾದ ಮಾಹಿತಿ ಪಡೆಯುತ್ತಿದ್ದೇವೆ. ಒಟ್ಟು ಎಷ್ಟು ಬಸ್‌ಗಳಿಗೆ ದರೋಡೆಕೋರರು ಕಲ್ಲು ಎಸೆದಿದ್ದಾರೆ ಎನ್ನುವ ಮಾಹಿತಿ ಪಡೆದು ದೂರು ದಾಖಲು ಮಾಡಲಾಗುವುದು’ ಎಂದು ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗೋಲಪಲ್ಲಿಯಿಂದ ತಿಂಥಣಿ ಬ್ರಿಡ್ಜ್ 5 ಕಿ.ಮೀ ಅಂತರದಲ್ಲಿ ಇದೆ. ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಚಾಲಕರು ಗೋಲಪಲ್ಲಿಯಲ್ಲಿ ಘಟನೆ ನಡೆದ ನಂತರ ತಿಂಥಣಿ ಬ್ರಿಡ್ಜ್ ಬಳಿ ಬಂದು ಒಂದೆಡೆ ಸೇರಿ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
‘ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯ ಆವರಣದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್‌ಗಳನ್ನು ತಂದು ನಿಲ್ಲಿಸಲಾಗಿದೆ. ಗೋಲಪಲ್ಲಿ ಬಳಿ ಬಸ್‌ಗಳ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಈ ಕುರಿತು ತನಿಖೆ ಚುರುಕುಗೊಳಿಸಲಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.