ಮಸ್ಕಿ: ವಿಜಯದಶಮಿ ನಿಮಿತ್ತ ಶುಕ್ರವಾರ ತಾಲ್ಲೂಕಿನಾದ್ಯಂತ ಆಯುಧ ಪೂಜೆ ಶ್ರದ್ಧಾ ಭಕ್ತಯಿಂದ ಆಚರಿಸಲಾಯಿತು.
ಪೊಲೀಸ್ ಠಾಣೆಯಲ್ಲಿ ಬಂದೂಕು ಸೇರಿದಂತೆ ಠಾಣೆಯ ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಸಿಪಿಐ ಬಾಲಚಂದ್ರ ಡಿ. ಲಕ್ಕಂ, ಪಿಎಸ್ಐ ತಾರಾಭಾಯಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆಯ ಪೌರಕಾರ್ಮಿಕರು ಆಯುಧ ಪೂಜೆ ನೆರವೇರಿಸಿದರು. ವಾಹನಗಳು, ಗುದ್ದಲಿ ಸಲಾಕೆಗಳಿಗೆ ಪೂಜೆ ಸಲ್ಲಿಸಿದರು.
ಜೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಪೂಜೆ ಸಲ್ಲಿಸಿದರು. ಎಇಇ ವೆಂಕಟೇಶ, ಎಂಜನಿಯರ್ ನಯನ ಸೇರಿದಂತೆ ಜೆಸ್ಕಾಂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸೇರಿ ವಿವಿಧ ಖಾಸಗಿ ಆಸ್ಪತ್ರೆ, ಅಂಗಡಿ, ಸಂಘ–ಸಂಸ್ಥೆಗಳಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು.
ಲಾರಿ ಮಾಲೀಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಆಟೊ ಚಾಲಕರು ತಮ್ಮ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆ ನೆರವೇರಿಸಿದರು.
ಶಾಸಕ ಆರ್. ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಸೇರಿದಂತೆ ಹಲವಾರು ಮುಖಂಡರು ತಮ್ಮ ತಮ್ಮ ಬೆಂಬಲಿಗರ ಪೂಜೆಗಳಿಗೆ ತೆರಳಿ ವಾಹನಗಳಿಗೆ ಪುಷ್ಪಾರ್ಪಣೆ ಮಾಡಿದರು
ಸಾಮೂಹಿಕ ಬನ್ನಿ ಆಚರಣೆ: ವಿಜಯದಶಮಿ ನಿಮಿತ್ತ ಪಟ್ಟಣದಲ್ಲಿ ಸಾಮೂಹಿಕ ಬನ್ನಿ ಮುಡಿಯಲಾಯಿತು. ಹೀರಾಲಾಲ್ ಸಿಂಗ್ ಮಾಲಿ ಪಾಟೀಲ ಕುಟುಂಬಸ್ಥರು ಮೊದಲು ಭ್ರಮರಾಂಬ ದೇವಸ್ಥಾನದ ಬಳಿಯ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಭ್ರಮರಾಂಬ ದೇವಸ್ಥಾನ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಸಾರ್ವಜನಿಕರು ಬನ್ನಿ ಮುಡಿದು ವಿಜಯ ದಶಮಿ ಶುಭ ಕೋರಿದರು.
ಶಾಸಕ ಆರ್. ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲಮ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಸೇರಿದಂತೆ ಅನೇಕ ಮುಖಂಡರು ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.