ADVERTISEMENT

ಬಾಂಗ್ಲಾ ವಲಸಿಗರಿಗೆ ಸ್ವಾತಂತ್ರ್ಯದ ಸಂಭ್ರಮ

ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರದಿಂದ ಸಂತಸ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 13:09 IST
Last Updated 14 ಡಿಸೆಂಬರ್ 2019, 13:09 IST
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಸಿಂಧನೂರು ತಾಲ್ಲೂಕಿನ ಪುನರ್ವಸತಿ ಕ್ಯಾಂಪ್-3 ರಲ್ಲಿ ಬಂಗಾಲಿ ನಿವಾಸಿಗಳು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು
ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಸಿಂಧನೂರು ತಾಲ್ಲೂಕಿನ ಪುನರ್ವಸತಿ ಕ್ಯಾಂಪ್-3 ರಲ್ಲಿ ಬಂಗಾಲಿ ನಿವಾಸಿಗಳು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಾಚರಣೆ ಮಾಡಿದರು   

ಸಿಂಧನೂರು:ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರವಾದ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಿಂಧನೂರು ತಾಲ್ಲೂಕಿನ ಬಾಂಗ್ಲಾ ಪುನರ್ವಸತಿ ಕ್ಯಾಂಪ್‍ಗಳಲ್ಲಿ ಸಂಭ್ರಮ ಮನೆ ಮಾಡಿದೆ.

1971ರಲ್ಲಿ ಬಾಂಗ್ಲಾ ದೇಶ ವಿಭಜನೆಯಾದ ಸಮಯದಲ್ಲಿ ವಲಸೆ ಬಂದಿರುವ ನಿರಾಶ್ರಿತರಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದೆಲ್ಲೆಡೆ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಒಡಿಸ್ಸಾ, ರಾಜಸ್ತಾನ, ಬಿಹಾರ, ಅಸ್ಸಾಂ, ತ್ರಿಪುರ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಒಟ್ಟು 18 ರಾಜ್ಯಗಳಲ್ಲಿ ಬಾಂಗ್ಲಾ ಪುನರ್ವಸತಿ ಕ್ಯಾಂಪ್‌ಗಳಿವೆ.

ಆರಂಭದಲ್ಲಿಯೆ ಭಾರತದ ಪೌರತ್ವ ನೀಡಲಾಗಿತ್ತು. ಆದರೆ 2003 ರಲ್ಲಿ ತಿದ್ದುಪಡಿಯಾದ ಪೌರತ್ವದ ಕಾಯ್ದೆಯಲ್ಲಿ ಕುಟುಂಬದ ಗಂಡ ಮತ್ತು ಹೆಂಡತಿ ಇಬ್ಬರೂ ಪೌರತ್ವ ಪಡೆದಿದ್ದರೆ ಮಾತ್ರ ಅವರ ಮಕ್ಕಳಿಗೆ ಪೌರತ್ವ ಲಭ್ಯ ಎನ್ನುವ ನಿಯಮ ಬಂತು. ಇದರಿಂದ ಬಂಗಾಲಿ ನಿರಾಶ್ರಿತರು ತೊಂದರೆ ಅನುಭವಿಸುವಂತಾಗಿತ್ತು.

ADVERTISEMENT

ಚುನಾವಣಾ ಗುರುತಿನ ಚೀಟಿ, ಆಹಾರ ಪಡಿತರ ಪಡೆಯಲು ಮತ್ತು ಮಕ್ಕಳನ್ನು ಶಾಲೆಗೆ ದಾಖಲಿಸುವುದು ಸಹ ಕಷ್ಟವಾಗಿತ್ತು. ಹಲವು ಹಕ್ಕುಗಳಿಂದ ವಂಚಿತರಾಗಿ ಬದುಕುತ್ತಿದ್ದರು. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪೌರತ್ವದ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಿಂದ ಬಾಂಗ್ಲಾದೇಶದಿಂದ ಬಂದಿರುವ ನಿರಾಶ್ರಿತರಿಗೆ ಪೌರತ್ವ ಭಾಗ್ಯ ಸಿಗಲಿದೆ.

‘ನೂತನ ಮಸೂದೆಯಿಂದ ಸ್ವಾತಂತ್ರ್ಯ ಸಿಕ್ಕಂತಾಗಿದೆ’ ಎಂದು ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿಯ ರಾಷ್ಟೀಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಸೇನ್ ರಫ್ತಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ವಲಸಿಗರಿಗೂ ನಾಗರಿಕತ್ವ ಸಿಗುವುದರಿಂದ ದೇಶದ ನಾಗರಿಕರಿಗೆ ಸಿಗುವ ಎಲ್ಲ ವಿಧದ ಸೌಕರ್ಯಗಳಿಗೂ ನಾವು ಕೂಡ ಅರ್ಹರಾಗುತ್ತೇವೆ’ ಎಂದು ಅಖಿಲ ಭಾರತ ಬಂಗಾಲಿ ನಿರಾಶ್ರಿತರ ಸಮನ್ವಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಮೇಸ್ತ್ರಿ ವರ್ಷ ವ್ಯಕ್ತಪಡಿಸಿದರು.

‘ಕ್ಯಾಂಪ್‌ನಲ್ಲಿ ನೆಲೆಸಿ 20 ವರ್ಷ ಕಳೆದರೂ ಕೆಲವರಿಗೆ ಮತದಾರರ ಪಟ್ಟಿಯಲ್ಲಿ ಚುನಾವಣಾಧಿಕಾರಿಗಳು ಹೆಸರನ್ನೇ ಸೇರ್ಪಡೆ ಮಾಡಿಕೊಂಡಿಲ್ಲ. ನಮ್ಮದು ಶೂದ್ರ ಜಾತಿಯಾಗಿದ್ದು, ಪಶ್ಚಿಮ ಬಂಗಾಲದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡುವಂತೆ ಕೇಳುತ್ತಿದ್ದರೂ ಪ್ರತಿಫಲ ಸಿಕ್ಕಿಲ್ಲ. ಈಗ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ಮತ್ತೊಮ್ಮೆ ಹುಟ್ಟಿ ಬಂದಿರುವ ಅನುಭವ ಆಗುತ್ತಿದೆ’ ಎಂದು ಪುನರ್ವಸತಿ ಕ್ಯಾಂಪ್-2ರ ನಿವಾಸಿ ಮಲಿಕ್ ಖುಷಿಪಟ್ಟರು.

ತಾಲ್ಲೂಕಿನಲ್ಲಿ ಬಾಂಗ್ಲಾ ದೇಶದ ಐದು ಪುನರ್ವಸತಿ ಕ್ಯಾಂಪ್‍ಗಳಿದ್ದು, ಎಲ್ಲ ಕ್ಯಾಂಪುಗಳಲ್ಲಿಯೂ ಎರಡು ದಿನಗಳಿಂದ ಸಂಭ್ರಮಾಚರಣೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.