ಮಸ್ಕಿ: ಕ್ಷೇತ್ರದ ಜನರಿಗೆ ಕುಡಿಯುವ ನೀರು, ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ತೊಂದರೆಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೆ ಹೊಣೆ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿ ಕೃಷಿ ಇಲಾಖೆ ಅಧಿಕಾರಿಗಳು ಸೊಸೈಟಿ ಮೂಲಕವೇ ರಸಗೊಬ್ಬರ ಹಾಗೂ ಬಿತ್ತನೆ ಬೀಜ ರೈತರಿಗೆ ಪೂರೈಕೆ ಮಾಡಬೇಕು. ಒಂದು ವೇಳೆ ದಲಾಲಿಗಳ ಮೂಲಕ ಮಾಡಿದ್ದು ಕಂಡು ಬಂದರೆ ಮುಂದಾಗುವ ಪರಿಣಾಮವೇ ಬೇರೆ ಎಂದು ಎಚ್ಚರಿಸಿದರು.
ಸರಿಯಾಗಿ ಮಾಹಿತಿ ಇಲ್ಲದೇ ಸಭೆಗೆ ಬಂದ ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಶಾಸಕರು ಮಾಹಿತಿ ಇಲ್ಲದೇ ಸಭೆಗೆ ಯಾಕೆ ಬಂದಿರೀ ಎಂದು ಪ್ರಶ್ನಿಸಿದರು.
ವಗರನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ಆರು ತಿಂಗಳಾಗಿದೆ. ಆದರೆ, ಅಲ್ಲಿಯ ಜನರಿಗೆ ಇವತ್ತಿಗೂ ನೀರು ಕೊಡಲಾಗುತ್ತಿಲ್ಲ. ಆದರೆ, ಗುತ್ತಿಗೆದಾರರಿಗೆ ಪೂರ್ಣ ಹಣ ಪಾವತಿ ಮಾಡಿದ್ದು ಯಾವ ಉದ್ದೇಶಕ್ಕೆ ಎಂದು ಪಂಚಾಯತ್ ರಾಜ್ ಇಲಾಖೆಯ ಸಿಂಧನೂರು ವಿಭಾಗದ ಎಇಇ ಅವರನ್ನು ತರಾಟಗೆ ತೆಗೆದುಕೊಂಡರು.
ಜೆಜೆಎಂ ಯೋಜನೆಯಲ್ಲಿ ಮನೆ ಮನೆಗೆ ನೀರು ಪೂರೈಸುವ ಕಾಮಗಾರಿ ಕಳಪೆಯಾದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಕೆಲಸದ ಮೇಲೆ ಸರಿಯಾಗಿ ನಿಗಾವಹಿಸಿ. ಜಲಧಾರೆ ಯೋಜನೆ ದೊಡ್ಡ ಯೋಜನೆಯಾಗಿದ್ದು ಕಾಮಗಾರಿ ಕಳಪೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಲೋಕೋಪಯೋಗಿ, ಶಿಕ್ಷಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ನಡೆಸಲಾಯಿತು.
ತಹಶೀಲ್ದಾರ್ ಸುಧಾ ಅರಮನೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರ ಪವನಕುಮಾರ, ನರೇಗಾ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ, ತಾಲ್ಲೂಕು ಪಂಚಾಯಿತಿ ಮ್ಯಾನೇಜರ್ ಗಂಗಾಧರ ಮೂರ್ತಿ ಸೇರಿದಂತೆ ತಾಲ್ಲೂಕು ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕುಡಿಯುವ ನೀರಿಗಾಗಿ ಉಪ ಕಾಲುವೆಗೆ ನೀರು ಕೊಡಿ: ತುಂಗಭದ್ರಾ ಎಡದಂಡೆ ಕಾಲುವೆ ನೀರು ರಾಯಚೂರು ತಲುಪುವವರೆಗೆ ಮಸ್ಕಿ ಭಾಗದ ಹಳ್ಳಿಗಳಿಗೆ ನೀರು ಕೊಡುವುದಿಲ್ಲ ಎಂದರೆ ಹೇಗೆ? ಜಿಲ್ಲಾಧಿಕಾರಿ ಆದೇಶ ಬದಿಗೊತ್ತಿ ನಮ್ಮ ವ್ಯಾಪ್ತಿಯ ಉಪ ಕಾಲುವೆಗಳ ಮೂಲಕ ಹಳ್ಳಿಗಳ ಕೆರೆ ತುಂಬಲು ನೀರು ಕೊಡಬೇಕು ಎಂದು ಶಾಸಕ ಆರ್. ಬಸನಗೌಡ ನೀರಾವರಿ ನಿಗದಮ ಎಇಇ ದಾವುದ್ ಅವರಿಗೆ ಸೂಚಿಸಿದರು.
ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಕುಡಿಯುವ ನೀರಿಗಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಕಾಲುವೆಗೆ ನೀರು ಬಿಡಿಸಲಾಗಿದೆ. ಮೊದಲು ನಮ್ಮ ಹಳ್ಳಿ ಜನರಗೆ ನೀರು ಬಿಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.