ಸಿರವಾರ: ಪರಿಸರ ಸಂರಕ್ಷಣೆ ಎಂದರೆ ಸಾಕು ಸಸಿ ನೆಟ್ಟು ಮನೆಗೆ ಹೋಗುವ ಇಂದಿನ ದಿನಗಳಲ್ಲಿ ತನ್ನ ವೈಯಕ್ತಿಕ ಕೆಲಸಗಳ ಒತ್ತಡದ ನಡುವೆಯೂ ತಾಲ್ಲೂಕನ್ನು ಹಸಿರುಮಯ ಮಾಡಲು ಪರಿಸರ ಸಂರಕ್ಷಣಾ ಕಾರ್ಯದಲ್ಲಿ ನಿರತನಾಗಿದ್ದಾನೆ ಪಟ್ಟಣದ ಯುವಕ ಬಸವರಾಜ ಪೂಜಾರಿ ಬುದ್ದಿನ್ನಿ.
ಖಾಸಗಿ ಶಾಲೆಯೊಂದರಲ್ಲಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ ಅವರು, ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ, ಬೇರೆ ದುಡಿಮೆಯೊಂದಿಗೆ ಪರಿಸರ ಸಂರಕ್ಷಣೆಗಾಗಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದಾನೆ.
ಕೇವಲ ಒಂದು ಸಸಿ ನೆಟ್ಟು ಪೋಷಣೆ ಮಾಡದೇ, ಯಾರದೇ ಮನೆಯಾದರೂ ಸ್ಥಳ ಖಾಲಿ ಕಂಡರೆ ಸಾಕು ಮನೆಯವರಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಸಸಿಗಳನ್ನು ತಂದು ಮರವಾಗಿ ಬೆಳೆಯುವವರೆಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಾರಕ್ಕೊಂದು ಬಾರಿ ಭೇಟಿ ನೀಡಿ ಗಿಡಗಳನ್ನು ಸಂರಕ್ಷಣೆ ಮಾಡುತ್ತಿದ್ದಾನೆ.
ಮಳೆಗಾಲದ ಪ್ರಾರಂಭದಲ್ಲಿ ಪ್ರತಿವರ್ಷ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ಹಳ್ಳಿಗಳಿಗೆ ತೆರಳಿ ಮನೆಗೊಂದು ಮರದಂತೆ ವಿತರಿಸಿ ಪರಸರಿ ಬೆಳೆಸಲು ಅಭಿಯಾನವನ್ನು ಕೈಗೊಳ್ಳತ್ತಾನೆ.
ಕೇವಲ ಸಸಿ ನೆಟ್ಟು ಪೋಷಣೆ ಮಾಡದೇ ಯಾವುದೇ ಗಿಡ ಮುರಿದರೂ ಅದರ ತುಂಡುಗಳನ್ನು ವೈಜ್ಞಾನಿಕ ಜೋಡಣೆ ಮಾಡಿ ಮೊದಲಿನಂತೆ ಅದನ್ನು ಪೋಷಿಸುವ ಕೆಲಸವನ್ನು ಮಾಡುತ್ತಾನೆ.
ಹಸಿರು ಕ್ರಾಂತಿಗೆ ಪ್ರೇರಣೆಯಾದ ನವಲಕಲ್ಲು ಬೃಹನ್ಮಠ: ‘ತಾಲ್ಲೂಕಿನ ನವಲಕಲ್ಲು ಬೃಹನ್ಮಠದ ಆವರಣವು ಹಸಿರು ವಾತಾವರನದಿಂದ ತುಂಬಿದ್ದು, ಆವರಣ ಪ್ರವೇಶಿಸಿದರೆ ಸಾಕು ಮಲೆನಾಡು ಪ್ರದೇಶದಂತೆ ಭಾಸವಾಗುತ್ತದೆ. ವರ್ಷದ ಹಿಂದೆ ಖಾಲಿ ಸ್ಥಳವಾಗಿದ್ದ, ಆವರಣವನ್ನು ಸಂಪೂರ್ಣ ಹಸಿರುಮಯವಾಗಿಸಿದ್ದಾರೆ ಬಸವರಾಜ‘ ಎಂದು ಮಠದ ಪೀಠಾಧಿಪತಿ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಅವರು.
ಮಠಕ್ಕೆ ಬರುವ ಭಕ್ತರು ದೇವಸ್ಥಾನಕ್ಕೆ ಹೋಗುವ ಮೊದಲು ಹಸಿರುಮಯವಾದ ಆವರಣದಲ್ಲಿ ಸ್ವಲ್ಪ ಸಮಯ ಕಾಲ ಕಳೆದೆ ಮುಂದೆ ಹೋಗುತ್ತಾರೆ.
ಮಠದ ಆವರಣದಲ್ಲಿ ಗಿಡಗಳನ್ನು ಬೆಳೆಸಬೇಕೆಂಬ ನಮ್ಮ ಸಂಕಲ್ಪಕ್ಕೆ ಬಸವರಾಜ ಸಹಕಾರಿಯಾಗಿದ್ದಾನೆ.
ಬಸವರಾಜ ಸ್ವತಃ ಮುಂದೆ ಬಂದು ವಿವಿಧ ಬಗೆಯ ಹೂವು, ಹಣ್ಣು, ವನಸ್ಪತಿ, ಜೌಷಧೀಯ ಸಸ್ಯಗಳು ಸೇರಿದಂತೆ ಹೆಚ್ಚು ಆಮ್ಲಜನಕ ನೀಡುವ ಗಿಡಗಳನ್ನು ತಂದು ನೆಟ್ಟಿದ್ದಲ್ಲದೇ ಸಮಯ ಸಿಕ್ಕಾಗಲೆಲ್ಲ ಮಠಕ್ಕೆ ಬಂದು ಅವುಗಳ ನಿರ್ವಹಣೆ ಮಾಡುತ್ತಾನೆ ಎನ್ನುತ್ತಾರೆ ಶ್ರೀಗಳು.
ಶ್ರೀಮಠದಿಂದ ಸಹ ಸಸಿ ಹಂಚುವ ಕೆಲಸ ಪ್ರಾರಂಭಿಸಿದ್ದು, ಪರಿಸರ ಕಾಳಜಿಗೆ ಸಮಯ ನೀಡಲು ಭಕ್ತರಿಗೆ ಸಂದೇಶ ನೀಡಲಾಗುತ್ತಿದೆ ಇದಕ್ಕೆಲ್ಲಾ ಬಸವರಾಜ ಅವರೇ ಸ್ಪೂರ್ತಿ.
**
ನಾನು ಕೆಲಸ ಮಾಡುವ ಶಾಲೆಯ ವಾತಾವರಣ ಹೆಚ್ಚು ಹಸಿರು ಮಯವಾಗಿದ್ದರಿಂದ ಅಲ್ಲಿ ಕೆಲಸ ಮಾಡಿ ಇನ್ನು ಹೆಚ್ಚು ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಪ್ರತಿಯೊಬ್ಬರಲ್ಲಿ ಪರಿಸರದ ಜಾಗೃತಿ ಮೂಡಿಸಿ ಪ್ರತಿ ಮನೆಯಲ್ಲಿಯೂ ಗಿಡಗಳನ್ನು ಬೆಳೆಸುವಂತೆ ಮನವೊಲಿಸುತ್ತಿದ್ದೇನೆ.
–ಬಸವರಾಜ ಪೂಜಾರಿ ಬುದ್ದಿನ್ನಿ
***
‘ನಾನು ಪ್ರತಿ ಭಾನುವಾರ ಬಸವರಾಜ ಅವರೊಂದಿಗೆ ಪರಿಸರ ಸಂರಕ್ಷಣಾ ಕೆಲಸದಲ್ಲಿ ತೊಡಗುತ್ತಿದ್ದು, ಇದರಿಂದ ವಾರದ ಕೆಲಸದ ಒತ್ತಡವೂ ಕಡಿಮೆಯ ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ‘.
– ಸಂತೋಷ ನಾಯಕ, ಸಿರವಾರ
***
ದೂಳಿನಿಂದ ಕೂಡಿದ್ದ ಆವರಣವನ್ನು ಹಚ್ಚ ಹಸಿರಾಗುವಂತೆ ಮಾಡಿ, ಭಕ್ತರಿಗೆ ವಿಶ್ರಾಂತಿ ತಾಣವಾಗಿ ಮಾಡಿದ ಬಸವರಾಜ ಪೂಜಾರಿ ಅವರ ಕೆಲಸ ಹೀಗೆ ಮುಂದುರೆಯಲಿ.
–ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನವಲಕಲ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.