ಸಿರವಾರ : ‘ಜನರ ಆಶಯದಂತೆ ನೂತನ ತಾಲ್ಲೂಕು ಕೇಂದ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ಪಟ್ಟಣದಲ್ಲಿ ವಿವಿಧ ಕಾಮಗಾರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
‘ಪಟ್ಟಣವು ನೂತನ ತಾಲ್ಲೂಕು ಕೇಂದ್ರವಾದ ನಂತರ ರಾಜ್ಯ ಸರ್ಕಾರದಿಂದ ಅಗತ್ಯವಾದ ಅನುದಾನ ಬಾರದ ಕಾರಣ ತಾಲ್ಲೂಕು ಅಭಿವೃದ್ಧಿ ಕುಂಠಿತವಾಗಿದ್ದು, ಮುಂಬರುವ ದಿನಗಳಲ್ಲಿ ಅಗತ್ಯತೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಹೆಚ್ಚಿನ ಅನುದಾನ ತರುವುದಾಗಿ’ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಆಡಳಿತ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕಿನ ಮುಖಂಡರ ಸಹಕಾರದೊಂದಿಗೆ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.
‘ಪಟ್ಟಣದಲ್ಲಿ ₹2 ಕೋಟಿ ವೆಚ್ಚದ ಬಸವ ವೃತ್ತದಿಂದ ಮಾನವಿ ಕ್ರಾಸ್ ರಸ್ತೆವರೆಗೆ ಮುಖ್ಯ ರಸ್ತೆಗೆ ಲೈಟ್ ಪೋಲ್ಸ್, ಡಿವೈಡರ್, ಹೈ-ಮಾಸ್ ಲೈಟ್ ನಿರ್ಮಾಣ, ಎಸ್‌ಡಿಬಿ ಯೋಜನೆಯಡಿ ₹2 ಕೋಟಿ ವೆಚ್ಚದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
₹10 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿರುವ 1ನೇ ಮತ್ತು 5ನೇ ವಾರ್ಡ್ನಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟನೆ ಮಾಡಲಾಯಿತು.
ತಹಶಿಲ್ದಾರ್ ಪರಶುರಾಮ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಚನ್ನಬಸವ ಗಡ್ಲ, ಪಟ್ಟಣ ಪಂಚಾಯಿತಿ ಸದಸ್ಯ ಇಮಾಮ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಶ್ಯಾಮುಲಪ್ಪ, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ಜಿ.ಲೋಕರೆಡ್ಡಿ, ಜಂಬುನಾಥ ಯಾದವ್, ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಗುರುನಾಥ ರೆಡ್ಡಿ, ನಾಗರಾಜ ಭೋಗವತಿ, ಡಿಎನ್ವೈ ನಾಗರಾಜಗೌಡ, ವಿಜಯಲಕ್ಷ್ಮಿ, ಈಶಪ್ಪ ಹೂಗಾರ, ಚಂದ್ರಶೇಖರಯ್ಯ ಸ್ವಾಮಿ, ಕಾಶಿನಾಥ ಸರೋದೆ, ಎಂ.ಪ್ರಕಾಶಪ್ಪ, ದಾನಪ್ಪ, ರವಿಕುಮಾರ ವಕೀಲ, ಸೂರಿ ಅಮರೇಶ ನಾಯಕ ಹಾಗೂ ಗೋಪಾಲ ನಾಯಕ ಹರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.