ADVERTISEMENT

ಬಿಜೆಪಿ-ಜೆಡಿಎಸ್ ಮೈತ್ರಿ ಅಪವಿತ್ರ: ಶಾಸಕ ಹಂಪನಗೌಡ ಬಾದರ್ಲಿ ಟೀಕೆ

ನದೀಮ್ ಮುಲ್ಲಾ ಸೇರಿ ಅನೇಕರು ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 14:04 IST
Last Updated 16 ಏಪ್ರಿಲ್ 2024, 14:04 IST
ಸಿಂಧನೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಂ.ಡಿ.ನದೀಮ್ ಮುಲ್ಲಾ ಅವರು ತಮ್ಮ ಗೆಳೆಯರ ಬಳಗದೊಂದಿಗೆ ಸಾಮೂಹಿಕವಾಗಿ ಜೆಡಿಎಸ್ ಪಕ್ಷವನ್ನು ತೊರೆದು ಶಾಸಕ ಹಂಪನಗೌಡ ಬಾದರ್ಲಿ ಸಮಕ್ಷಮದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಸಿಂಧನೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಂ.ಡಿ.ನದೀಮ್ ಮುಲ್ಲಾ ಅವರು ತಮ್ಮ ಗೆಳೆಯರ ಬಳಗದೊಂದಿಗೆ ಸಾಮೂಹಿಕವಾಗಿ ಜೆಡಿಎಸ್ ಪಕ್ಷವನ್ನು ತೊರೆದು ಶಾಸಕ ಹಂಪನಗೌಡ ಬಾದರ್ಲಿ ಸಮಕ್ಷಮದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು   

ಸಿಂಧನೂರು: ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಂ.ಡಿ.ನದೀಮ್ ಮುಲ್ಲಾ ಅವರು ತಮ್ಮ ಗೆಳೆಯರ ಬಳಗದೊಂದಿಗೆ ಸಾಮೂಹಿಕವಾಗಿ ಪಕ್ಷ ತೊರೆದು ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ನೇತೃತ್ವದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಸಮಕ್ಷಮದಲ್ಲಿ ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ನದೀಮ್ ಮುಲ್ಲಾ, ನಗರಸಭೆ ಮಾಜಿ ಸದಸ್ಯ ಸೈಯ್ಯದ್ ಹಾಜಿಮಸ್ತಾನ್, ಮುಖಂಡರಾದ ಮುಜಾಫರ್ ಖಾನ್, ಅಜರ್ ಖಾನ್, ಚಾಂದ್‍ಪಾಷಾ, ಪರ್ವೆಜ್, ಮಹಿಬೂಬ್ ಏತ್ಮಾರಿ, ಸೋಹೆಲ್ ದೇಸಾಯಿ, ತನ್ವೀರ್ ಹುಸೇನ್, ಸೈಯ್ಯದ್ ಆಸೀಫ್‍ಅಲಿ ಗನಿಸಾಬ್ ಮತ್ತಿತರರಿಗೆ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಶಾಸಕ ಹಂಪನಗೌಡ ಬಾದರ್ಲಿ ಸೇರ್ಪಡೆ ಮಾಡಿಕೊಂಡರು.

‘ಈ ಲೋಕಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಅಪವಿತ್ರವಾಗಿದೆ. ಜೆಡಿಎಸ್‍ಗೆ ಜಾತ್ಯತೀತ ತತ್ವ-ಸಿದ್ದಾಂತ ಇಲ್ಲ. ಬರೀ ನಾಟಕ ಎಂಬುದಕ್ಕೆ ಇದುವೇ ಸಾಕ್ಷಿ. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಆಡಳಿತ ವಿರುದ್ಧ ಅನೇಕ ಬಾರಿ ವಾಗ್ದಾಳಿ ನಡೆಸಿ, ಏಕಾಏಕಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದರ ಹಿಂದೆ ಕುಟುಂಬ ರಾಜಕಾರಣದ ರಕ್ಷಣೆ ಉದ್ದೇಶವಿರಬಹುದು. ಜೆಡಿಎಸ್‍ಗೆ ಅಧಿಕಾರ ಬೇಕೇ ಹೊರತು ರಾಜ್ಯದ ಅಭಿವೃದ್ಧಿ, ಜನರ ಹಿತ ಬೇಕಿಲ್ಲ’ ಎಂದು ದೂರಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನುಡಿದಂತೆ ನಡೆದುಕೊಳ್ಳುವ ಮೂಲಕ ಜನರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿದೆ. ಇದುವೇ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒತ್ತು ನೀಡಲಿದೆ’ ಎಂದ ಅವರು ‘ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಇಂದು ನಾಮಪತ್ರ ಸಲ್ಲಿಸುತ್ತಿದ್ದು, ಈ ಬಾರಿ ಇವರ ಗೆಲುವು ನಿಶ್ಚಿತವಾಗಿದೆ’ ಎಂದು ತಿಳಿಸಿದರು.

‘ನದೀಮ್ ಮುಲ್ಲಾ ಮತ್ತು ಅವರ ಗೆಳೆಯರ ಬಳಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ವಾರ್ಡ್‍ಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕುರಿತು ಜನರಿಗೆ ತಿಳಿಸಿ ಈ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ನದೀಮ್ ಮುಲ್ಲಾ ಹಾಗೂ ಅವರ ಗೆಳೆಯರ ಘನತೆಗೆ ಧಕ್ಕೆ ಬರದಂತೆ ಪಕ್ಷ ನಡೆಸಿಕೊಳ್ಳುತ್ತದೆ’ ಎಂದು ಹೇಳಿದರು.

ನದೀಮ್ ಮುಲ್ಲಾ ಮಾತನಾಡಿ ‘ಜೆಡಿಎಸ್ ಪಕ್ಷದ ತತ್ವ-ಸಿದ್ದಾಂತ ಮತ್ತು ವೈಚಾರಿಕತೆಗೆ ವಿರುದ್ಧವಾಗಿ ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಇದಕ್ಕೆ ಬೇಸತ್ತು ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಅವರ ನಾಯಕತ್ವ ಮೆಚ್ಚಿ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇವೆ’ ಎಂದು ತಿಳಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎಂ.ಕಾಳಿಂಗಪ್ಪ ವಕೀಲ, ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಸದಸ್ಯರಾದ ಶೇಖರಪ್ಪ ಗಿಣಿವಾರ, ಎಚ್.ಬಾಷಾ, ಆಲಂಬಾಷಾ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ವೈ, ಮುಖಂಡರಾದ ಎಂ.ಲಿಂಗಪ್ಪ ದಢೇಸುಗೂರು, ಸುಭಾಷ್ ಫ್ರಾಂಕ್ಲೀನ್, ಶರಣಯ್ಯಸ್ವಾಮಿ, ರಫಿ ಅಹ್ಮದ್, ವೆಂಕಟೇಶ ಬಂಡಿ, ನಬಿಸಾಬ್, ಉಮೇಶ, ವಿಶ್ವನಾಥ ಮಾ.ಪಾ, ಶಿವರಾಜ ಪಾಟೀಲ್ ಗುಂಜಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.