ADVERTISEMENT

ರಾಯಚೂರು | ಗಲಭೆ ಪ್ರಕರಣದ ಆರೋಪಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 7:10 IST
Last Updated 3 ಜನವರಿ 2024, 7:10 IST
   

ರಾಯಚೂರು: 31 ವರ್ಷ ಹಿಂದಿನ ಗಲಭೆ ಪ್ರಕರಣದ ಆರೋಪಿಯೊಬ್ಬರ ಬಂಧನ ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ಕೆದಕಿ ರಾಮ ಭಕ್ತನನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿರುವುದು ಖಂಡನೀಯ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿರುವಾಗ ಶ್ರೀ ರಾಮ ಮಂದಿರಕ್ಕಾಗಿ ಹೋರಾಡಿದ ಭಕ್ತನನ್ನು ಬಂಧಿಸಿದ್ದು ಸರಿಯಲ್ಲ. ಪ್ರಕರಣದ ಉಳಿದ ರಾಮಭಕ್ತರಿಗಾಗಿ ಪೊಲೀಸ್ ಇಲಾಖೆ ಹುಡುಕಾಡುತ್ತಿದ್ದು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ಹೊಂದಿದೆ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಪ್ರತಿಭಟನೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ‘31 ವರ್ಷದ ಹಳೆಯ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರ ಕರ ಸೇವಕನ್ನು ಬಂಧಿಸುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ. ಆ ಮೂಲಕ ಸಮಸ್ತ ದೇಶದ ಹಿಂದೂಗಳ ಭಾವನೆಗಳಿಗೆ ಹಾಗೂ ಶ್ರದ್ಧೆಗೆ ಘಾಸಿ ಮಾಡಲು ಹೊರಟಿದ್ದಾರೆ‘ ಎಂದು ಆರೋ‍ಪಿಸಿದರು.

‘ಕಾಂಗ್ರೆಸ್ ಪದೇ ಪದೇ ಹಿಂದೂ ವಿರೋಧಿ ನೀತಿಗಳನ್ನು ಪ್ರದರ್ಶಿಸಿ ಒಂದು ಸಮುದಾಯದ ಓಲೈಕೆ ರಾಜಕಾರಣ ಮಾಡುತ್ತಿದೆ. ಇದನ್ನು ದೇಶದ ಸಮಸ್ತ ಸನಾತನಿಗಳು ಕ್ಷಮಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಮ ಮಂದಿರ ಉದ್ಘಾಟನೆಯ ಸಂಬಂಧ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಅಕ್ಷತೆ ನೀಡಿ ಆಹ್ವಾನ ನೀಡುವ ಬಗ್ಗೆಯೂ ಕಾಂಗ್ರೆಸ್ ನಾಯಕರು ಅವಮಾನ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ಧರ್ಮದ ಪ್ರತಿಯೊಂದು ವಿಷಯದಲ್ಲೂ ಅಪಸ್ವರ ತೆಗೆದು ವಿರೋಧಿಸುವ ಮನೋಭಾವನೆ ಸರಿಯಲ್ಲ. ಇಂತಹ ಕೃತ್ಯಗಳು ಕೈಬಿಡಬೇಕು. ಕೂಡಲೇ ಬಂಧಿಸಿದ ರಾಮ ಭಕ್ತನನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್ ಸರ್ಕಾರ ರಾಮಮಂದಿರ ಉದ್ಘಾಟನೆಯಾಗುವ ಸಮಯದಲ್ಲೇ ರಾಮಭಕ್ತರನ್ನು ಬಂಧಿಸಲಾಗಿದೆ. ಹಿಂದೂ ಸಮಾಜದ ಪರವಾಗಿ ಇರುವವರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮಾನಂದ ಯಾದವ್, ಮುಖಂಡರಾದ ಎನ್ ಶಂಕ್ರಪ್ಪ, ಶಂಕರ ರೆಡ್ಡಿ, ರಾಜಕುಮಾರ, ಬಿ ಗೋವಿಂದ, ಚಂದ್ರಶೇಖರ, ಶಂಶಾಲಂ, ಸುಲೋಚನಾ, ವಾಣಿಶ್ರೀ, ಸಂಗೀತಾ, ಭರತ್ ಕುಮಾರ, ಜಗನ್ನಾಥನ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.