ಮಸ್ಕಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಜಲಾಶಯಗಳು ಭರ್ತಿಯಾಗಿ ರೈತರು ಸಂತಸದಲ್ಲಿ ಇದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರುವಿಹಾಳ ಹೇಳಿದರು.
ತಾಲ್ಲೂಕಿನ ಮಾರಲದಿನ್ನಿ ಮಸ್ಕಿ ಜಲಾಶಯ ಭರ್ತಿಯಾದ ಹಿನ್ನೆಲೆ ಮಂಗಳವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ಅವರು ಮಾತನಾಡಿದರು.
‘ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಬಿಜೆಪಿಯವರು ಮಳೆಯಾಗಿಲ್ಲ, ಸಿದ್ದರಾಮಯ್ಯನವರ ಕಾಲ್ಗುಣ ಸರಿಯಿಲ್ಲ ಎಂದು ಟೀಕಿಸುತ್ತಿದ್ದರು. ಈಗ ಸಾಕಷ್ಟು ಮಳೆಯಾಗುತ್ತಿದೆ. ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಸಿದ್ದರಾಮಯ್ಯನವರ ಕಾಲ್ಗುಣ ಸರಿಯಾಗಿದೆ. ಬಿಜೆಪಿಯವರ ಟೀಕೆಗಳಿಗೆ ಪೃಕೃತಿಯೇ ಉತ್ತರ ಕೊಡುತ್ತಿದೆ’ ಎಂದರು.
‘ಮಸ್ಕಿ ಜಲಾಶಯ 0.5 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ರೈತರ ಮನವಿ ಮೇರೆಗೆ ಈಗಾಗಲೇ ಎಡ ಹಾಗೂ ಬಲದಂಡೆ ಕಾಲುವೆ ಮೂಲಕ ನೀರು ಕೊಡಲಾಗಿದೆ. ಯೋಜನೆ ವ್ಯಾಪ್ತಿಯ ರೈತರು ಇದರಿಂದ ಸಂತಸದಲ್ಲಿದ್ದಾರೆ. ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ’ ಎಂದರು.
‘ಮಸ್ಕಿ ನಾಲಾ ಯೋಜನೆಯ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ಜಲಾಶಯದ ಒಳ ಹರಿವು 400 ಕ್ಯೂಸೆಕ್ ಇದ್ದು, 300 ಕ್ಯೂಸೆಕ್ ನೀರನ್ನು ಹಳ್ಳಕ್ಕೆ ಬಿಡಾಲಾಗುತ್ತಿದೆ’ ಎಂದರು.
ಲಿಂಗಸುಗೂರು ಉಪ ವಿಭಾಗಾಧಿಕಾರಿ ಬಸವಣಪ್ಪ ಕಾಲಶೆಟ್ಟಿ, ತಹಶೀಲ್ದಾರ್ ಮಲ್ಲಪ್ಪ ಯರಗೋಳ, ಮಸ್ಕಿ ನಾಲಾ ಯೋಜನೆ ಎಇಇ ಗುರುಮೂರ್ತಿ, ಎಂಜಿನಿಯರ್ ದಾವುದ್, ಸರ್ಕಲ್ ಇನ್‌ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ, ಸಬ್ ಇನ್‌ಸ್ಪೆಕ್ಟರ್ ತಾರಾಭಾಯಿ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರು ಹಾಗೂ ಸುತ್ತಮುತ್ತ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.