ಸಿಂದಗಿ:ತಮಿಳುನಾಡಿನ ಸಂಸ್ಕೃತಿ ವಿಜಯಪುರ ಜಿಲ್ಲೆಯಲ್ಲೂ ನೆಲೆಯೂರಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರ ಕಂಚಿನ ಪ್ರತಿಮೆಗಳು ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿದ್ದು, ಇದೀಗ ‘ದೇವೇಗೌಡ–ಮನಗೂಳಿ’ ವೃತ್ತ ಎಂದೇ ಹೆಸರಾಗಿದೆ.
ಇವರಿಬ್ಬರೂ ಸಮಕಾಲೀನರು. ಆದ್ರೂ ರಾಜಕೀಯವಾಗಿ ಗುರು–ಶಿಷ್ಯ ಎಂದು ಗುರುತಿಸಿಕೊಂಡರೂ; ಇಂದಿಗೂ ಪರಮಾಪ್ತರು. ಜಿಲ್ಲಾ ರಾಜಕಾರಣ, ಸಿಂದಗಿ ರಾಜಕೀಯದಲ್ಲಿ ಜೆಡಿಎಸ್ ಪಾಲಿಗೆ ಮನಗೂಳಿಯೇ ಪರಮೋಚ್ಛ.
‘ನನ್ನಿಂದ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ ನಿಭಾಯಿಸಲಾಗಲ್ಲ. ಬೇರೆಯವರನ್ನು ನಿಯೋಜಿಸಿ’ ಎಂದು ಮನಗೂಳಿ ಹಲ ಬಾರಿ ದುಂಬಾಲು ಬಿದ್ದರೂ; ದೇವೇಗೌಡ ಬದಲಾವಣೆಗೆ ಅವಕಾಶ ನೀಡಿಲ್ಲ. ಇಬ್ಬರ ನಡುವೆ ಅಷ್ಟೇ ಅನ್ಯೋನ್ಯತೆಯಿದೆ. ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೊಳ್ಳುತ್ತಿದೆ ಎನ್ನುವಾಗಲೇ ಮನಗೂಳಿಗೆ ಸಚಿವ ಸ್ಥಾನ ಖಾತ್ರಿಯಾಗಿತ್ತು. ಇದಕ್ಕೆ ಇಬ್ಬರ ನಡುವಿನ ಗಾಢ ಸಂಬಂಧವೇ ಕಾರಣ.
ವೃತ್ತದ ಇತಿಹಾಸ...
ಗುತ್ತಿ ಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ದಿ.ಶಂಕರಗೌಡ ಪಾಟೀಲ ಡಂಬಳ (ಜಿ.ಪಂ. ಮಾಜಿ ಸದಸ್ಯ), ಶಂಕ್ರೆಪ್ಪ ಕರ್ನಾಳ ಗೋಲಗೇರಿ, ಸಮಿತಿಯ ಅಧ್ಯಕ್ಷ ಭೀಮಾಜಿ ಕುಲಕರ್ಣಿ, ಉಪಾಧ್ಯಕ್ಷ ಮುದಗೌಡ ಬಿರಾದಾರ ಸಾಸಾಬಾಳ, ಕಾರ್ಯದರ್ಶಿ ಮಹಿಬೂಬ್ ಹಳಿಮನಿ ಹಾಗೂ ಗೋಲಗೇರಿ ಮತ್ತು ಸುತ್ತಲಿನ ರೈತರು ಈ ವೃತ್ತ, ಪ್ರತಿಮೆಯ ನಿರ್ಮಾತೃಗಳು.
ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಶ್ರಮಿಸಿದ ಇಬ್ಬರು ರಾಜಕೀಯ ನಾಯಕರ ಕಂಚಿನ ಪ್ರತಿಮೆಗಳನ್ನು ನಿರ್ಮಿಸಿ, ವೃತ್ತ ಸ್ಥಾಪಿಸಿ ನಿತ್ಯವೂ ಸ್ಮರಿಸುತ್ತಿದ್ದಾರೆ ಇಲ್ಲಿನ ಜನ. ಇದರ ನಿರ್ಮಾಣಕ್ಕಾಗಿ ರೈತರೇ ₹ 50 ಲಕ್ಷ ಹಣ ಸಂಗ್ರಹಿಸಿ, ಜಾಗ ಖರೀದಿಸಿರುವುದು ವಿಶೇಷ.
‘ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳುವ ತನಕ ಕಾಲಿಗೆ ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆಗೈದಿದ್ದ ಮನಗೂಳಿ ಎರಡು ವರ್ಷ ಪಾದರಕ್ಷೆಯನ್ನೇ ಧರಿಸಿರಲಿಲ್ಲ. ತಮ್ಮ ಉದ್ದೇಶ ಈಡೇರಿದ ಬಳಿಕವೇ ನಮ್ ಕಾಕಾ ಕಾಲಿಗೆ ಚಪ್ಪಲಿ ಹಾಕಿದ್ದು. ಅದಕ್ಕಾಗಿಯೇ ಪ್ರತಿಮೆ ನಿರ್ಮಿಸಿದ್ದೇವೆ’ ಎನ್ನುತ್ತಾರೆ ಸ್ಥಳೀಯರು.
‘ರೈತರ ಜೀವನಾಡಿ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಅನುಷ್ಠಾನದ ರೂವಾರಿಗಳಾದ, ನೀರಾವರಿ ಹರಿಕಾರ ಎಚ್.ಡಿ.ದೇವೇಗೌಡ, ಈ ಭಾಗದ ಆಧುನಿಕ ಭಗೀರಥ ಎಂದೇ ಹೆಸರುವಾಸಿಯಾಗಿರುವ ಸಚಿವ ಎಂ.ಸಿ.ಮನಗೂಳಿ ಅವರ ವೃತ್ತ, ಪ್ರತಿಮೆ ನಿರ್ಮಿಸಿರುವುದು ಇಡೀ ರಾಜ್ಯದಲ್ಲೇ, ಅದೂ ನಮ್ಮೂರಲ್ಲೇ ಮೊದಲು’ ಎನ್ನುತ್ತಾರೆ ಗೋಲಗೇರಿ ಗೊಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ರವಿರಾಜ ದೇವರಮನಿ.
ದೇವೇಗೌಡ, ಮನಗೂಳಿ ಸಮ್ಮುಖವೇ 2014ರ ಫೆ.12ರಂದು ಈಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೃತ್ತ ಉದ್ಘಾಟಿಸಿ, ಪ್ರತಿಮೆಗಳನ್ನು ಅನಾವರಣಗೊಳಿಸಿದ್ದರು. ಗದಗಿನ ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ, ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪುರ ಇದಕ್ಕೆ ಸಾಕ್ಷಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.