ADVERTISEMENT

ಮಸ್ಕಿ | ಶಿಥಿಲಾವ್ಯಸ್ಥೆಯಲ್ಲಿ ಕಟ್ಟಡ: ವಿದ್ಯಾರ್ಥಿಗಳಿಗೆ ಆತಂಕ

ಪ್ರಕಾಶ ಮಸ್ಕಿ
Published 12 ಜೂನ್ 2024, 6:21 IST
Last Updated 12 ಜೂನ್ 2024, 6:21 IST
   

ಮಸ್ಕಿ: ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಶಿಥಿಲಗೊಂಡ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಜೀವಭಯದಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ಹತ್ತು ವರ್ಷಗಳ ಹಿಂದೆ ಪಟ್ಟಣದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಆರಂಭಿಸಿದ ಐಟಿಐ (ಕೈಗಾರಿಕಾ ತರಬೇತಿ ಕೇಂದ್ರ) ಕಾಲೇಜು ಕಟ್ಟಡಕ್ಕೆ ಸ್ವಂತ ಜಾಗ ಇಲ್ಲದ ಕಾರಣ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿನ ಶಿಥಿಲಗೊಂಡ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಟ್ಟಡದ ಚಾವಣಿ ಕುಸಿದು ಬಿಳುತ್ತಿದೆ. ಬೇರೆ ಮಾರ್ಗವಿಲ್ಲದ ಪ್ರಾಚಾರ್ಯರು ಇದೇ ಕಟ್ಟಡದಲ್ಲಿ ವಿದ್ಯಾರ್ಥಿಗಳ ಪಾಠ ಹಾಗೂ ತರಬೇತಿ ನಡೆಸುತ್ತಿದ್ದಾರೆ.

ಹಲವಾರು ಬಾರಿ ಕಟ್ಟಡ ಚಾವಣಿಯ ಪದರುಗಳು ಉದುರಿ ಬಿದ್ದು ಸ್ವಲ್ಪದರಲ್ಲಿಯೇ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಬೆಂಚ್, ಟೇಬಲ್‌ಗಳು ಮುರಿದಿವೆ. ಮಳೆ ಬಂದರೆ ಸಾಕು ಇಡೀ ಕೊಠಡಿಗಳು ಸೋರುತ್ತವೆ. ಹತ್ತು ವರ್ಷಗಳಿಂದ ಕೈಗಾರಿಕಾ ತರಬೇತಿ ಕೇಂದ್ರ ನಡೆಯುತ್ತಿದ್ದರೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಕಡೆ ಗಮನ ಹರಿಸದೇ ಇರುವುದಕ್ಕೆ ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡಮಕ್ಕಳಿಗೆ ಕೈಗಾರಿಕಾ ತರಬೇತಿ ನೀಡಿ ಅವರಿಗೆ ಸ್ವಉದ್ಯೋಗ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿದ ಈ ಕೇಂದ್ರದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷ ಸೇರಿ 80 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲ. ಪ್ರತಿನಿತ್ಯ ವಿದ್ಯಾರ್ಥಿಗಳು ಸೌಕರ್ಯಕ್ಕಾಗಿ ಪರದಾಡಬೇಕಾಗಿದೆ. ಸ್ವಂತ ಕಟ್ಟಡಕ್ಕೆ ಕವಿತಾಳ ರಸ್ತೆಯಲ್ಲಿ ಭೂಮಿ ಗೊತ್ತು ಮಾಡಲಾಗಿದೆ. ಅದು ಕಾಗದಲ್ಲಿಯೇ ಉಳಿದಿದೆ. ಸೂಕ್ತ ಕಟ್ಟಡ ಹಾಗೂ ಸೌಕರ್ಯಗಳನ್ನು ಒದಗಿಸದಿದ್ದರೆ ತಾಲ್ಲೂಕಿನ ಮಹತ್ವಾಂಕ್ಷೆಯ ಕೈಗಾರಿಕಾ ತರಬೇತಿ ಕೇಂದ್ರ ಮುಚ್ಚುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಶಾಸಕರು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.