ಸಿಂಧನೂರು: ನಗರದ ಸ್ತ್ರೀಶಕ್ತಿ ಭವನದ ಮುಂಭಾಗದಲ್ಲಿರುವ ಡಬ್ಬಾ ಅಂಗಡಿಗಳ ತೆರವಿಗೆ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮತ್ತು ಸದಸ್ಯರು ಶುಕ್ರವಾರ ಕಾರ್ಯಾಚರಣೆಗೆ ಪ್ರಯತ್ನಿಸಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದರು.
ಶುಕ್ರವಾರ ಸಂಜೆ ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಅಮರಗುಂಡಪ್ಪ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಸಿಪಿಡಿಓ ಲಿಂಗನಗೌಡ ಹಾಗೂ ಒಕ್ಕೂಟದ ಹಲವು ಮಹಿಳೆಯರು ತಾ.ಪಂ ವ್ಯಾಪ್ತಿಗೆ ಬರುವ ಜಾಗವನ್ನು ಸ್ವಾಧೀನಪಡಿಸಿಕೊಂಡು ತಂತಿ ಬೇಲಿ ಹಾಕಲು ಯತ್ನಿಸಿದರು. ತರಕಾರಿ, ಮಾಂಸದಂಗಡಿ, ಬಿರಿಯಾನಿ, ಚಪ್ಪಲಿ ಅಂಗಡಿಗಳನ್ನು ತೆರವು ಮಾಡಬೇಕು ಎಂದು ಸೂಚಿಸಿದರು.
ಇದರಿಂದ ಆಕ್ರೋಶಗೊಂಡ ವ್ಯಾಪಾರಸ್ಥರು ‘ಏಕಾಏಕಿ ಅಂಗಡಿಗಳನ್ನು ತೆಗೆಯಿರಿ ಎಂದರೆ ಎಲ್ಲಿಗೆ ಹೋಗಬೇಕು’ ಎಂದು ಆಕ್ಷೇಪಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ನಮ್ಮ ಕರ್ನಾಟಕ ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ, ವೀರ ಮದಕರಿ ನಾಯಕ ಯುವಕ ಸೇನೆಯ ಅಧ್ಯಕ್ಷ ವಿಶ್ವನಾಥ ನಾಯಕ, ಕಾಂಗ್ರೆಸ್ ಮುಖಂಡ ಹಾರೂನ್‍ಪಾಷಾ ಜಾಗೀರದಾರ್ ‘ಮೊದಲು ತಾ.ಪಂ ಜಾಗೆ ಎಲ್ಲಿಯವರೆಗೆ ಇದೆ ಹಾಗೂ ಡಿವೈಡರ್‌ನಿಂದ 75 ಅಡಿ ಅಗಲ ರಸ್ತೆ ಇದೆಯೋ ಇಲ್ಲವೋ ಎಂದು ಗುರುತಿಸಬೇಕು. ವ್ಯಾಪಾರಸ್ಥರಿಗೆ ವಾರದ ಮುಂಚೆ ನೋಟಿಸ್ ನೀಡಬೇಕು. ಏಕಾಏಕಿ ತೆರವು ಮಾಡುವುದು ಸರಿಯಲ್ಲ. ಶಾಸಕರು ಊರಿನಲ್ಲಿ ಇಲ್ಲ. ಅವರು ಬರುವವರೆಗೂ ತೆರವು ಕಾರ್ಯ ಸ್ಥಗಿತಗೊಳಿಸಬೇಕು’ ಎಂದರು.
ಈ ವೇಳೆ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ಅಧಿಕಾರಿಗಳು ಮತ್ತು ಮುಖಂಡರ ಮನವೋಲಿಸಿ ಸಮಾಧಾನಗೊಳಿಸಿದರು. ವಿವಿಧ ಸಂಟನೆಗಳ ಮುಖಂಡರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.