ADVERTISEMENT

ಸಂಸ್ಕಾರದಿಂದ ಯುವಕರ ಭವಿಷ್ಯ ಉಜ್ವಲ: ಬಿ.ವೈ ವಿಜಯೇದ್ರ

ಹಾಲುಮತ ಸಂಸ್ಕೃತಿ ವೈಭದ ಯುವಜನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 16:18 IST
Last Updated 12 ಜನವರಿ 2024, 16:18 IST
ಜಾಲಹಳ್ಳಿ ಸಮೀಪದ ಕನಕಗುರು ಪೀಠದಲ್ಲಿ ಶುಕ್ರವಾರ ಆರಂಭವಾದ ಹಾಲುಮತ ಸಂಸ್ಕೃತಿ ವೈಭವದ ಯುವಜನ ಸಮಾವೇಶವನ್ನು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಬಿ.ವೈ. ವಿಜಯೇದ್ರ ಉದ್ಘಾಟಿಸಿದರು
ಜಾಲಹಳ್ಳಿ ಸಮೀಪದ ಕನಕಗುರು ಪೀಠದಲ್ಲಿ ಶುಕ್ರವಾರ ಆರಂಭವಾದ ಹಾಲುಮತ ಸಂಸ್ಕೃತಿ ವೈಭವದ ಯುವಜನ ಸಮಾವೇಶವನ್ನು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಬಿ.ವೈ. ವಿಜಯೇದ್ರ ಉದ್ಘಾಟಿಸಿದರು   

ಜಾಲಹಳ್ಳಿ (ರಾಯಚೂರು): ‘ಯುವಕರು ಉತ್ತಮ ಸಂಸ್ಕಾರ ಹೊಂದಿದರೆ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇದ್ರ ಹೇಳಿದರು.

ತಿಂಥಣಿ ಬ್ರಿಜ್ಡ್ ಬಳಿಯ ಕಲಬುರಗಿ ವಿಭಾಗದ ಕಾಗಿನೆಲೆ ಕನಕಗುರು ಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಾಲುಮತ ಸಂಸ್ಕೃತಿ ವೈಭದ ಕಾರ್ಯಕ್ರಮದ ಮೊದಲೇ ದಿನದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

‘ರೈತರು ಕೃಷಿಗಾಗಿ ಉತ್ತಮ ಬೀಜ ಆಯ್ಕೆ ಮಾಡಿಕೊಂಡು ಉಳುಮೆ ಮಾಡಿ ನೀರು ಹಾಯಿಸಿ, ಗೊಬ್ಬರ ಹಾಕಿದರೆ ಮಾತ್ರ ಉತ್ತಮ ಫಸಲು ಬರಲು ಸಾಧ್ಯ‌. ಅದೇ ರೀತಿ ಯುವಕರು ಒಳ್ಳೆಯ ಸಂಸ್ಕಾರ ಅಳವಡಿಸಿಕೊಂಡರೆ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ’ ಎಂದರು.

ADVERTISEMENT

‘ಸ್ವಾಮಿ ವಿವೇಕನಂದ ಜಯಂತಿ‌ ದಿನ ಯುವಜನ ಸಮಾವೇಶ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಗಿನೆಲೆ ಅಭಿವೃದ್ಧಿಗೆ ₹60 ಕೋಟಿ, ಕನಕದಾಸರ ಹುಟ್ಟೂರು ಹಾವೇರಿ ಜಿಲ್ಲೆಯ ಬಾಡ ಗ್ರಾಮದ ಅಭಿವೃದ್ಧಿ ₹10 ಕೋಟಿ ಅನುದಾನ ಮಂಜೂರು ಮಾಡಿದ್ದರು. ಕನಕ ಜಯಂತಿಗೆ ಸರ್ಕಾರಿ ರಜೆ‌ ಘೋಷಿಸಿದ್ದರು. ನಾನು ಪ್ರಥಮ ಬಾರಿಗೆ ಶಿಕಾರಿಪುರದಿಂದ ಆಯ್ಕೆಯಾಗಲು‌ ಹಾಲುಮತ ಬೆಂಬಲ ಹೆಚ್ಚಿನ ಪ್ರಮಾಣದಲ್ಲಿ ಇದೆ’ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಹಾಲುಮತ ಸಮಾಜದವರು ಪ್ರಕೃತಿಯ ಮಡಿಲಲ್ಲಿ ಸರಳವಾಗಿ ಜೀವನ ನಡೆಸುತ್ತಾರೆ. ಕುರಿಯ ಹಿಕ್ಕೆಯಲ್ಲೇ ಲಿಂಗವನ್ನು ಕಂಡ ಭಕ್ತಿಯ ಸಮಾಜ ಇದು. ಭಕ್ತಿ ಸಾಹಿತ್ಯಕ್ಕೆ ಕನಕದಾಸರು, ರಾಜ್ಯಭಾರಕ್ಕೆ ಹಕ್ಕ–ಬುಕ್ಕರು, ದಾಸ ಸಾಹಿತ್ಯಕ್ಕೆ ಕಾಳಿದಾಸರ ಕೊಡುಗೆ ಅಪಾರ’ ಎಂದು ಹೇಳಿದರು.

ಇದೇ ವೇಳೆ ಕೆ.ಎಂ. ಮೇತ್ರಿ ಅವರ ಬರೆದ ‘ಗೋಂಡ ಆದಿವಾಸಿಗಳು’ ಪುಸಕ್ತ ಲೋಕಾರ್ಪಣೆ ಮಾಡಲಾಯಿತು.

ಕಾಗಿನೆಲೆ ಕನಕಗುರು ಪೀಠದ ನಿರಂಜನನಂದಪುರಿ ಸ್ವಾಮೀಜಿ, ತಿಂಥಣಿ ಬ್ರಿಜ್ಡ್ ಕನಕ ಗುರು ಪೀಠದ ಸಿದ್ಧರಾಮನಂದ ಸ್ವಾಮೀಜಿ, ಇಳಕಲ್ಲ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸದರಾದ ರಾಜಾ ಅಮರೇಶ್ವರ ನಾಯಕ, ಉಮೇಶ್ ಜಾಧವ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಶಾಸಕರಾದ ದೊಡ್ಡನಗೌಡ ಪಾಟೀಲ, ಶಿವರಾಜ ಪಾಟೀಲ, ಮಾನಪ್ಪ ವಜ್ಜಲ, ರಘುನಾಥರಾವ್ ಮಲ್ಕಾಪುರೆ, ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ಸಿಂಧನೂರು, ಬಿ.ವಿ. ನಾಯಕ, ಮಾಜಿ ಶಾಸಕ ಶಿವನಗೌಡ ನಾಯಕ, ನಿಕೇತ್ ರಾಜ್ ಮೌರ್ಯ ತುಮಕೂರ, ತ್ರಿವಿಕ್ರಮ ಜೋಶಿ, ಶರಣು ತಳ್ಳಿಕೇರಿ, ಗೋವಿಂದರಾಜ ಚಿಂಚೋಡಿ, ವಿ.ಎಂ. ಮೇಟಿ, ಚಂದಪ್ಪ ಬುದ್ದಿನ್ನಿ, ಮಹಾಂತೇಶ ಇದ್ದರು.

ಬಹುದಿನಗಳಿಂದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಸೆಯೂ ಆಗಿದೆ.
-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ
ಕನಕಗುರು ಪೀಠಕ್ಕೆ ಶುಕ್ರವಾರ ಸುರಪುರ ತಾಲ್ಲೂಕಿನ ಹಾಲುಮತ ಸಮಾಜದ ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.