ADVERTISEMENT

ಸಿಂಧನೂರು | ಶಾಂತಿ-ಸೌಹಾರ್ದದಿಂದ ಮೊಹರಂ ಆಚರಿಸಿ: ಡಿವೈಎಸ್‍ಪಿ ಬಿ.ಎಸ್.ತಳವಾರ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:27 IST
Last Updated 2 ಜುಲೈ 2024, 14:27 IST
ಸಿಂಧನೂರಿನ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ನಡೆದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಡಿವೈಎಸ್‍ಪಿ ಬಿ.ಎಸ್.ತಳವಾರ ಮಾತನಾಡಿದರು
ಸಿಂಧನೂರಿನ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ನಡೆದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಡಿವೈಎಸ್‍ಪಿ ಬಿ.ಎಸ್.ತಳವಾರ ಮಾತನಾಡಿದರು   

ಸಿಂಧನೂರು: ‘ಹಬ್ಬಗಳು ಭಾವೈಕ್ಯದ ಸಂಕೇತವಾಗಿದ್ದು, ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಎಲ್ಲ ಜಾತಿ, ಧರ್ಮದವರು ಹಬ್ಬಗಳನ್ನು ಆಚರಿಸಬೇಕು. ಕಾನೂನು ಉಲ್ಲಂಘಿಸಿ, ಅಹಿತಕರ ಘಟನೆಗಳು ನಡೆದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ’ ಎಂದು ಡಿವೈಎಸ್‍ಪಿ ಬಿ.ಎಸ್.ತಳವಾರ ಎಚ್ಚರಿಕೆ ನೀಡಿದರು.

ಸ್ಥಳೀಯ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಮಂಗಳವಾರ ನಡೆದ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಜುಲೈ 12 ರಂದು ಅಲಾಯಿ ದೇವರುಗಳ ಪಂಜಾಗಳು ಕೂರುವ ಮೂಲಕ ಮೊಹರಂ ಹಬ್ಬ ಆರಂಭವಾಗಲಿದ್ದು, 17 ರಂದು ದಫನ್ ಆಗಲಿವೆ. ಹಿಂದೂ-ಮುಸ್ಲಿಮರು ಒಗ್ಗೂಡಿ ಈ ಹಬ್ಬ ಆಚರಿಸಬೇಕು. ಅಲಾಯಿ ದೇವರು ಕೂರಿಸುವವರು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು, ಇಲಾಖೆ ಸೂಚಿಸುವ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ತಿಳಿಸಿದರು.

ADVERTISEMENT

ಮೊಹರಂ ಹಬ್ಬದ ನೆಪದಲ್ಲಿ ಯುವಕರು ಮಧ್ಯರಾತ್ರಿ ತಿರುಗುವುದು, ಬೈಕ್‍ಗಳ ಸೈಲೆನ್ಸರ್ ಕಿತ್ತು ಭಾರಿ ಶಬ್ದ ಮಾಡುತ್ತ ಸಂಚರಿಸುವುದು, ಜಾತಿ-ಧರ್ಮಗಳ ಹೆಸರಿನಲ್ಲಿ ಗಲಾಟೆ ಮಾಡುವುದು ಒಳ್ಳೆಯದಲ್ಲ. ಆಯಾ ಜಾತಿ, ಧರ್ಮಗಳ ಹಿರಿಯ ಮುಖಂಡರು ಯುವಕರಿಗೆ ಹಬ್ಬಗಳ ಮಹತ್ವ ಮತ್ತು ಸಂದೇಶ ಸಾರಿ ತಿಳಿಹೇಳಬೇಕು. ಮುಂದಿನ ದಿನಗಳಲ್ಲಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಎಲ್ಲ ಸಮಾಜಗಳ ಹಿರಿಯ ಮುಖಂಡರ ಪಟ್ಟಿ ಮಾಡಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಪೊಲೀಸ್ ಇನ್ಸ್‍ಪೆಕ್ಟರ್ ಸುಧೀರ್‌ಕುಮಾರ್‌ ಬೆಂಕಿ ಮಾತನಾಡಿ, ಅಲಾಯಿ ದೇವರುಗಳನ್ನು ಕೂರಿಸುವ ಮಂಟಪದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಇಲಾಖೆ ಸೂಚಿಸಿದ ಮಾರ್ಗದಲ್ಲಿ ಪಂಜಾಗಳ ಮೆರವಣಿಗೆ ನಡೆಸಬೇಕು. ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಒಂದು ವೇಳೆ ಗಲಭೆ ನಡೆದರೆ ಆಯೋಜಕರನ್ನೇ ಹೊಣೆ ಮಾಡಬೇಕಾಗುತ್ತದೆ ಎಂದರು.

ಸಭೆಯಲ್ಲಿ ಮುಖಂಡರಾದ ಎಚ್.ಎನ್.ಬಡಿಗೇರ್, ಎಂ.ಡಿ.ನದೀಮ್ ಮುಲ್ಲಾ, ವೀರೇಶ ಯಡಿಯೂರಮಠ, ರವಿ ಹಿರೇಮಠ, ಚನ್ನಬಸವರಾಜ ಕುಂಬಾರ, ಭೀಮೇಶ ಕವಿತಾಳ, ನಾರಾಯಣ ಬೆಳಗುರ್ಕಿ ಮಾತನಾಡಿದರು. ಪೊಲೀಸ್ ಸಬ್‍ಇನ್‌ಸ್ಪೆಕ್ಟರ್ ಎಚ್.ಬಸವರಾಜ, ಮುಖಂಡರಾದ ಸಲ್ಮಾನ್ ಜಾಗೀರದಾರ್, ಚನ್ನಬಸವಸ್ವಾಮಿ ಹರೇಟನೂರು, ಬುಡ್ಡನ್‍ಸಾಬ, ಅಮೀನಸಾಬ ನದಾಫ್, ರಬ್ಬಾನಿ ಜಾಗೀರದಾರ್, ಸುರೇಶ ಗೊಬ್ಬರಕಲ್, ಆದೇಶ ಮೇಸ್ತ್ರಿ, ಮಂಜುನಾಥ ಗುಮ್ಮಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.