ರಾಯಚೂರು: ಯೇಸುಸ್ವಾಮಿ ಜನ್ಮದಿನ ಕ್ರಿಸ್‌ಮಸ್‌ಹಬ್ಬವನ್ನು ಜಿಲ್ಲೆಯಾದ್ಯಂತ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಮಕ್ಕಳಿಂದ ವಯೋವೃದ್ಧರವರೆಗೂ ಹೊಸ ಉಡುಪುಗಳನ್ನು ಧರಿಸಿ, ಕುಟುಂಬ ಸಮೇತ ಚರ್ಚ್ ಗಳಿಗೆ ಭೇಟಿ ನೀಡುತ್ತಿದ್ದಾರೆ. ಚರ್ಚ್ ಗಳ ಆವರಣದಲ್ಲಿ ನಿರ್ಮಾಣ ಮಾಡಿರುವ ಯೇಸು ಜನಿಸಿದ ಗ್ರಾಮ ಬೆತ್ಲೆಹೆಮ್ ಮಾದರಿ ನೋಡುವುದಕ್ಕಾಗಿ ಬೇರೆ ಧರ್ಮೀಯರು ಭೇಟಿ ನೀಡುತ್ತಿರುವುದು ವಿಶೇಷ.
ರೈಲ್ವೆ ನಿಲ್ದಾಣ ಪಕ್ಕದ ಮೆಥೋಡಿಸ್ಟ್ ಚರ್ಚ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಕ್ರೈಸ್ತರು ನೆರೆದಿದ್ದು, ತಡರಾತ್ರಿವರೆಗೂ ಪ್ರಾರ್ಥನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸ್ಟೇಷನ್ ರಸ್ತೆಯ ಸೇಂಟ್ ಮೇರಿ ಚರ್ಚ್ ನಲ್ಲಿ ಮಾಡಿರುವ ಅಲಂಕಾರವು ಗಮನ ಸೆಳೆಯುತ್ತಿದೆ. ಆಶಾಪುರ ರಸ್ತೆಯ ಅಗಾಪೆ ಚರ್ಚ್ ಗೆ ವಿವಿಧೆಡೆಯಿಂದ ತಂಡೋಪ ತಂಡವಾಗಿ ಜನರು ಬರುತ್ತಿದ್ದಾರೆ.
ಕ್ರೈಸ್ತರು ಪರಸ್ಪರ 'ಮೇರಿ ಕ್ರಿಸ್ಮಸ್' ಎಂದು ಸಂಭೋಧಿಸಿ ಯೇಸು ಜನಿಸಿದ ದಿನದ ಖುಷಿಯನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಕಂಡು ಬಂತು.
ಬಾಲಯೇಸು ಶಿಕ್ಷಣ ಸಂಸ್ಥೆ ಆವರಣದಲ್ಲೂ ಕ್ರಿಸ್ಮಸ್ ನಿಮಿತ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಬೇರೆ ಧರ್ಮೀಯರು ಕ್ರೈಸ್ತ ಸ್ನೇಹಿತರ ಕೈಕುಲುಕಿ 'ಹ್ಯಾಪಿ ಕ್ರಿಸ್ಮಸ್' ಎಂದು ಶುಭಾಶಯ ಕೋರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.