ADVERTISEMENT

ರಾಯಚೂರು: ಶಾಲಾ ಕೋಣೆಗಳ‌ ಕೊರತೆ: ಮರದ‌ಡಿ ಮಕ್ಕಳಿಗೆ ಪಾಠ!

ಆಲ್ಕೋಡ್ ಗ್ರಾಮದಲ್ಲಿ ಕೊನೆಯಾಗದ ಶಾಲಾ ಮಕ್ಕಳ ಸಮಸ್ಯೆ

ನಾಗರಾಜ ಚಿನಗುಂಡಿ
Published 6 ಜುಲೈ 2022, 20:00 IST
Last Updated 6 ಜುಲೈ 2022, 20:00 IST
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಆಲ್ಕೋಡ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಕೋಣೆಗಳ ಕೊರತೆಯಿಂದ ಮಕ್ಕಳಿಗೆ ತರಗತಿ ಹೊರಭಾಗದಲ್ಲಿ ಶಿಕ್ಷಕರು ಪ್ರತಿದಿನ ಪಾಠ  ಹೇಳಿಕೊಡುತ್ತಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಆಲ್ಕೋಡ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಕೋಣೆಗಳ ಕೊರತೆಯಿಂದ ಮಕ್ಕಳಿಗೆ ತರಗತಿ ಹೊರಭಾಗದಲ್ಲಿ ಶಿಕ್ಷಕರು ಪ್ರತಿದಿನ ಪಾಠ  ಹೇಳಿಕೊಡುತ್ತಿದ್ದಾರೆ.   

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಆಲ್ಕೋಡ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಕಿರಿಕಿರಿಗಳ ಮಧ್ಯೆಯೇ ಶಾಲಾ ಆವರಣದ ಮರದಡಿ ಪಾಠ ಪ್ರವಚನ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಈಗಿರುವ ಏಳು ಶಾಲಾ ಕೋಣೆಗಳು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸಾಕಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಬಹುತೇಕ ದ್ವಿಗುಣವಾಗಿದ್ದು, ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳಿಲ್ಲ. ಏಳು ಕೋಣೆಗಳ ಪೈಕಿ ಒಂದು ಶಿಕ್ಷಕರ ಕೋಣೆ, ಇನ್ನೊಂದರಲ್ಲಿ ಬಿಸಿಯೂಟದ ಸಾಮಗ್ರಿಗಳಿವೆ. ಐದು ಕೋಣೆಗಳಲ್ಲಿ ತರಗತಿಗಳನ್ನು ಮಾಡಲಾಗುತ್ತಿದೆ. ಸುಮಾರು 50 ವಿದ್ಯಾರ್ಥಿಗಳು ಕುಳಿತುಕೊಳ್ಳಬೇಕಾದ ತರಗತಿಯಲ್ಲಿ ಸದ್ಯ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಪ್ರತಿದಿನ ಸರದಿಯಲ್ಲಿ ಒಂದು ತರಗತಿಯ ಮಕ್ಕಳಿಗೆ ಶಾಲೆಯ ಕಾರಿಡಾರ್‌ ಮತ್ತು ಮರದಡಿ ಪಾಠ ಮಾಡಲಾಗುತ್ತಿದೆ. ಮಳೆ ಆರಂಭವಾದರೆ ಮಕ್ಕಳೆಲ್ಲರೂ ತರಗತಿಯಲ್ಲಿ ನಿಂತುಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆ ಪರಿಹರಿಸಲು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಶಾಲಾ ಮುಖ್ಯಗುರುಗಳು ಸಂಬಂಧಿಸಿದವರ ಗಮನ ಸೆಳೆಯುತ್ತಿದ್ದಾರೆ. ಆದರೆ, ಶಾಲಾ ಕೋಣೆಗಳ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಸಮಾಧಾನ.

ADVERTISEMENT

ಕೋವಿಡ್‌ ಪೂರ್ವ 2019–20 ರಲ್ಲಿ ಶಾಲೆಯ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 317 ರಷ್ಟಿತ್ತು. 2020–21 ರಲ್ಲಿ 543 ಕ್ಕೆ ಸಂಖ್ಯೆ ಏರಿಕೆಯಾಗಿದೆ. ಅಲ್ಲಿಂದ ನಿರಂತರವಾಗಿ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಸದ್ಯ 646 ವಿದ್ಯಾರ್ಥಿಗಳ ನೋಂದಣಿಯಾಗಿದೆ. ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಹಾಸ್ಟೆಲ್‌ ಸೌಲಭ್ಯ ಇದೆ. ಹೀಗಾಗಿ ಸುತ್ತಮುತ್ತಲಿನ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಆಲ್ಕೋಡ್‌ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನೇ ಆಯ್ಕೆ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೌಲಭ್ಯಗಳನ್ನು ವಿಸ್ತರಿಸುವ ಅಗತ್ಯವಿದೆ.

ಮಕ್ಕಳ ಆಟಕ್ಕೆ ಮೀಸಲಾಗಿರುವ ಆಟದ ಮೈದಾನವು ಈಗ ಬಯಲು ತರಗತಿಯಾಗಿ ಬದಲಾಗಿದೆ. ಇದರಿಂದ ಕ್ರೀಡಾ ಚಟುವಟಿಕೆಗಳು ಕುಂಠಿತವಾಗಿದ್ದು, ಶಿಕ್ಷಕರು ಅಸಹಾಯಕರಾಗಿದ್ದಾರೆ. ಶಾಲಾ ಕೋಣೆಯ ಎದುರಿನ ಕಟ್ಟೆಯ ಮೇಲೂ ತರಗತಿಗಳು ನಡೆಯುತ್ತಿವೆ. ಹೀಗಾಗಿ ಒಳಗಿರುವವರು ಹೊರಬರುವಂತಿಲ್ಲ. ಹೊರಗಿನವರು ಒಳಹೋಗುವಂತಿಲ್ಲ ಎನ್ನುವ ಸ್ಥಿತಿ ಇದೆ.

‘ಸರ್ಕಾರವು ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಆದಷ್ಟು ಬೇಗನೆ ಶಾಲಾ ಕೋಣೆಗಳನ್ನು ನಿರ್ಮಿಸಬೇಕು. ಗಾಳಿ, ಮಳೆಯನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಹೊರಗೆ ಕುಳಿತುಕೊಳ್ಳುತ್ತಿದ್ದಾರೆ. ಶಾಲಾ ಕೋಣೆಗಳಲ್ಲಿ ಮಕ್ಕಳಿದ್ದರೆ ಪಾಠದ ಕಡೆಗೆ ಗಮನ ಇರುತ್ತದೆ. ಬಯಲಿನಲ್ಲಿ ಕುಳಿತುಕೊಳ್ಳುವುದರಿಂದ ಕಿರಿಕಿರಿಯಾಗುತ್ತದೆ. ಮಕ್ಕಳು ಪಾಲಕರ ಎದುರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ‘ ಎಂದು ತಾಯಪ್ಪ ಶಾವಂತಗೇರಾ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.