ತುರ್ವಿಹಾಳ: ಆರಂಭದಿಂದಲೂ ಸಕಾಲದಲ್ಲಿ ಮುಂಗಾರು ಮಳೆ ಬೀಳುತ್ತಿರುವುದರಿಂದ ಒಣಬೇಸಾಯ ಆಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕೋರೈಸುತ್ತಿದೆ. ಗಿಡಗಳಲ್ಲಿ ಹೂಮುಡಿದು, ಇನ್ನೂ ಅರ್ಧದಷ್ಟು ಕಾಯಿಗಳು ಕಟ್ಟುವ ಹಂತಕ್ಕೆ ಬಂದಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದಾಗಿ ಕಾಯಿಕೊರಕ ಕೀಟಬಾಧೆ ಹರಡುವ ಭೀತಿಯಿಂದ ರೈತರು ಆತಂಕಗೊಂಡಿದ್ದಾರೆ.
ತುರ್ವಿಹಾಳ ಪಟ್ಟಣದ ಹಾಗೂ ಹೋಬಳಿ ವ್ಯಾಪ್ತಿಯ ಕಲಮಂಗಿ, ಊಮಲೂಟಿ, ಚಿಕ್ಕಬೇರ್ಗಿ, ಹೆಸರೂರು, ಹತ್ತಿಗುಡ್ಡ, ಗುಂಡಾ, ಸಂಕನಾಳ ಸೇರಿ 20 ಗ್ರಾಮಗಳಲ್ಲಿ ಈ ವರ್ಷ ಮುಕ್ಕಾಲು ಭಾಗದ ಜಮೀನುಗಳಲ್ಲಿ ರೈತರು ತೊಗರಿ ಬೆಳೆಯನ್ನು ಬಿತ್ತನೆ ಮಾಡಿದ್ದಾರೆ. ಕಳೆದ ವರ್ಷ ಆರಂಭದಲ್ಲಿ ತೊಗರಿಗೆ ಕ್ವಿಂಟಲ್ 7.5ರಿಂದ 8 ಸಾವಿರದವರೆಗೂ ದರ ಇತ್ತು. ಕೊನೆಗೆ ಕ್ವಿಂಟಲ್‌ಗೆ 12 ಸಾವಿರಕ್ಕೆ ಮಾರಾಟವಾಗಿತ್ತು. ರೈತರು ಒಳ್ಳೆಯ ಆದಾಯ ಪಡೆದುಕೊಂಡಿದ್ದಾರೆ.
ಈ ಬಾರಿಯು ತೊಗರಿ ಬೆಳೆಗೆ ಉತ್ತಮ ಲಾಭ ದೊರೆಯಲಿದೆ ಎಂಬ ಆಶಾಭಾವನೆಯಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ತೊಗರಿ ಬೆಳೆಗೆ ಪ್ರತಿಕೂಲ ವಾತಾವರಣದಿಂದಾಗಿ ಕಾಯಿಕೊರಕ ಕೀಟಗಳು ಹೆಚ್ಚಾಗಿದ್ದು, ಎಲೆ, ಹೂವು ಹಾಗೂ ಕಾಯಿಗಳಲ್ಲಿ ತತ್ತಿ ಇಟ್ಟು ಗೂಡು ಕಟ್ಟಿ ಬೆಳೆಹಾನಿ ಸಂಭವಿಸಿ ಇಳುವರಿ ಕಡಿಮೆ ಬರಲಿದೆ ಎಂದು ರೈತರು ಅಳಲನ್ನು ತೋಡಿಕೊಂಡರು.
ಕಳೆದ ವರ್ಷ ಮಳೆಯ ಕೊರತೆಯಿಂದ ಒಂದು ಎಕರೆಗೆ 4ರಿಂದ 5 ಕ್ವಿಂಟಲ್ ಇಳುವರಿ ಬಂದಿತ್ತು. ಆದರೆ ಉತ್ತಮ ಮಳೆಯಿಂದಾಗಿ 8ರಿಂದ 9 ಕ್ವಿಂಟಲ್ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹12 ಸಾವಿರದಿಂದ ₹15 ಸಾವಿರ ಮಾರಾಟವಾದರೆ ಬೆಳೆಗೆ ಮಾಡಿದ ಖರ್ಚು ಹೋಗಿ ಸ್ವಲ್ಪ ಹಣ ಉಳಿತಾಯ ಮಾಡಬಹುದು ಎಂದು ರೈತ ಶಿವಪುತ್ರಪ್ಪ ಕೆಂಗೇರಿ ಆಶಯ ವ್ಯಕ್ತಪಡಿಸಿದರು.
ಪ್ರತಿ ವರ್ಷಕ್ಕಿಂತ ತೊಗರಿ ಬೆಳೆ ಈ ಬಾರಿ ಉತ್ತಮವಾಗಿ ಬೆಳೆದಿದೆ. ಆದರೂ ಎರಡರಿಂದ ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಿದ್ದೇವೆ. ಸಕಾಲಕ್ಕೆ ಕೃಷಿ ಅಧಿಕಾರಿಗಳ ಸಲಹೆ ಪಡೆದು ಉತ್ತಮ ಇಳುವರಿ ತೆಗೆಯಬಹುದುಜಿ.ರಾಜಶೇಖರ ಗಡೇದ, ರೈತ ತುರ್ವಿಹಾಳ
ಮೋಡ ಕವಿದ ವಾತಾವರಣದಿಂದಾಗಿ ತೊಗರಿ ಬೆಳೆಗೆ ಕೀಟಬಾಧೆ ಹೆಚ್ಚುತ್ತದೆ. ಅದರ ಹತೋಟಿಗಾಗಿ ತತ್ತಿನಾಶಕ ಪ್ರೋಪೆಸ್ಟೊ ಪಾಸ್ ಎಂಬ ಕ್ರಿಮಿನಾಶಕ ದ್ರಾವಣ ಸಿಂಪಡಣೆ ಮಾಡಬೇಕುಧರ್ಮಣ್ಣ ಕಲ್ಮನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ತುರ್ವಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.