ಮುದಗಲ್ (ರಾಯಚೂರು ಜಿಲ್ಲೆ): ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರವಿದೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೂ ಕ್ರಮ ತಗೆದುಕೊಳ್ಳುತ್ತಿಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
‘ಪಿಎಸ್‌ಐ ವರ್ಗಾವಣೆಗೆ ₹20 ರಿಂದ 30 ಲಕ್ಷ ಪಡೆದರೆ, ಪಿಎಸ್‌ಐ ನೇಮಕಾತಿಗೆ ₹80 ಲಕ್ಷ ಪಡೆಯಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಅನುದಾನ ಶಾಸಕರ ಕಲ್ಯಾಣಕ್ಕೆ ಬಳಕೆಯಾಗುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನನ್ನ ಸಂಬಂಧ ಗಟ್ಟಿಯಾಗಿದೆ. ಅದನ್ನು ಯಾರಿಂದಲೂ ಅಳಿಸಲಾಗದು. ನಾನು ಕಾಂಗ್ರೆಸ್ ತೊರೆದ ಬಳಿಕ ಕಾಂಗ್ರೆಸ್‌ನವರು ಮುಸ್ಲಿಮರ ಪರ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನವರದ್ದು ಮೃದು ಹಿಂದುತ್ವ ಧೋರಣೆ. ಕಾಂಗ್ರೆಸ್ ಅಲ್ಪ ಸಂಖ್ಯಾತ ಸಮುದಾಯಗಳಿಗೆ ನ್ಯಾಯ ನೀಡಿಲ್ಲ’ ಎಂದರು.
‘ನನಗೆ ವಿಧಾನ ಪರಿಷತ್ತಿನ 19 ಸದಸ್ಯರ ಬೆಂಬಲ ಇದ್ದರೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಮಾಡಲಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ತೊರೆದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಬರಲಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ಇದೆ’ ಎಂದು ಅವರು ತಿಳಿಸಿದರು.
ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಪ್ರದಾನ ಕಾರ್ಯದರ್ಶಿ ದಾದಾಪೀರ್, ಮುದಗಲ್ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಮುಖಂಡ ಸಿದ್ದು ಬಂಡಿ, ತಾಲ್ಲೂಕು ಮಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ ಮಾಕಾಪುರ, ಜಮೀರ್ ಖಾಜಿ, ಸೈಯದ್ ಯಾಸಿನ್ ಖಾದ್ರಿ, ಸೋಮಣ್ಣ ನಾಗಲಾಪುರ, ಕರಿಸನಗೌಡ ಜನತಾಪುರ, ಅನ್ವರ ಕಂದಗಲ್, ಮುಲ್ಲಾಸಾಬ ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.