ADVERTISEMENT

ನನ್ನ ಹೆಂಡತಿ ಯಾವತ್ತೂ ರಾಜಕೀಯಕ್ಕೆ ಬಂದವಳಲ್ಲ, ಅವಳನ್ನೂ ಬೀದಿಗೆ ತಂದಿದ್ದಾರೆ: CM

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
<div class="paragraphs"><p>ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸ್ವಾಭಿಮಾನಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಕೈಮುಗಿದರು. ಶಾಸಕ ಹಂಪಯ್ಯ ನಾಯಕ, ಸಚಿವರಾದ ಎನ್.ಎಸ್.ಬೋಸರಾಜು, ಶಿವರಾಜ ತಂಗಡಗಿ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಹಾಜರಿದ್ದರು.</p></div>

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸ್ವಾಭಿಮಾನಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಕೈಮುಗಿದರು. ಶಾಸಕ ಹಂಪಯ್ಯ ನಾಯಕ, ಸಚಿವರಾದ ಎನ್.ಎಸ್.ಬೋಸರಾಜು, ಶಿವರಾಜ ತಂಗಡಗಿ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಹಾಜರಿದ್ದರು.

   

ಪ್ರಜಾವಾಣಿ ಚಿತ್ರ

ಮಾನ್ವಿ (ರಾಯಚೂರು ಜಿಲ್ಲೆ): ‘ಹಿಂದುಳಿದ ಸಮಾಜದವನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಿಕೊಳ್ಳಲಾಗದೇ ರಾಜೀನಾಮೆ ಕೊಡಿ ಎಂದು ನಿತ್ಯ ಕಾಡುತ್ತಿದ್ದಾರೆ. ಇದರಿಂದ ನನಗೂ ಬೇಸರವಾಗಿದೆ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಮಾನ್ವಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು ‘ನಾನು ಯಾವುದೇ ತಪ್ಪು ಮಾಡದಿದ್ದರೂ ಕಪ್ಪುಚುಕ್ಕೆ ಇಟ್ಟು, ರಾಜಕೀಯವಾಗಿ ಹಣಿಯಲು ಮುಂದಾಗಿದ್ದಾರೆ. ಕುರಿ ಕಾಯೋನ ಮಗ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದನ್ನು ಇವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ’ ಎಂದು ಭಾವುಕರಾಗಿ ನುಡಿದರು.

‘ನನ್ನ ಹೆಂಡತಿ ಯಾವತ್ತೂ ರಾಜಕೀಯಕ್ಕೆ ಬಂದವಳಲ್ಲ. ಅವಳನ್ನೂ ಬೀದಿಗೆ ತಂದಿದ್ದಾರೆ. ಇದು ನ್ಯಾಯನಾ? ಇದನ್ನು ನೀವು ಒಪ್ಪಿಕೊಳ್ಳುತ್ತೀರಾ’ ಎಂದು ಸಭಿಕರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ‘ಅಂಬೇಡ್ಕರ್‌ ಆಶಯದಂತೆ ನಾನು ಬಡವರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಿ ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದು ಬಿಜೆಪಿ, ಜೆಡಿಎಸ್‌ನವರಿಗೆ ತಪ್ಪಾಗಿ ಕಾಣಿಸುತ್ತಿದೆ. ಐದು ಗ್ಯಾರಂಟಿಗಳನ್ನು ಕೊಟ್ಟಿದ್ದು ತಪ್ಪಾ?’ ಎಂದು ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ನಾನು ಬಡವರ ಪರ ಕೆಲಸ ಮಾಡುತ್ತಿರುವುದಕ್ಕೆ ಬಿಜೆಪಿ, ಜೆಡಿಎಸ್‌ನವರಿಗೆ ಹೊಟ್ಟೆ ಉರಿಯುತ್ತಿದೆ. ನನ್ನನ್ನು ರಾಜಕೀಯವಾಗಿ ಹಣಿಯಬೇಕು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇವರ ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಹೆದರಿ ಓಡಿ ಹೋಗುವುದಿಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಯಾವಾಗಲೂ ಹೀಗೆಯೇ ಇರಲಿ. ನಿಮಗೋಸ್ಕರ ನನ್ನ ಹೋರಾಟ ಮುಂದುವರಿಸುತ್ತೇನೆ’ ಎಂದರು.

‘ನಾನು ಮಾಡುತ್ತಿರುವ ಜನಪರ ಕೆಲಸಗಳನ್ನು ನೋಡಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಆರ್‌.ಅಶೋಕ, ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಅವರ ಮಗ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಹೊಟ್ಟೆ ಉರಿಯುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘2018ರಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಒಂದು ವರ್ಷ ಎರಡು ತಿಂಗಳು ಏನೂ ಕೆಲಸ ಮಾಡಲಿಲ್ಲ. ಕೊಟ್ಟ ಕುದುರೆಯನ್ನು ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ. ನಂತರ 17 ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿ ಮೂರೂವರೆ ವರ್ಷ ಆಡಳಿತ ನಡೆಸಿದ ಯಡಿಯೂರಪ್ಪ, ಬೊಮ್ಮಾಯಿ ರಾಜ್ಯವನ್ನು ಲೂಟಿ ಹೊಡೆದರು. ರಾಜ್ಯವನ್ನು ದಿವಾಳಿ ಮಾಡಿದ ಬಿಜೆಪಿಯವರನ್ನು 2023ರ ಚುನಾವಣೆಯಲ್ಲಿ ಜನ ಸೋಲಿಸಿದರು’ ಎಂದು ಟೀಕಿಸಿದರು.

‘ಬಿಜೆಪಿಯುವರು ಬಡವರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಮಹಿಳೆಯರ ವಿರೋಧಿಗಳಾಗಿದ್ದಾರೆ. ಬಿಜೆಪಿಯವರಿಗೆ ತಕ್ಕ ಉತ್ತರ ಕೊಡಬೇಕು ಎಂಬ ಕಾರಣಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಬಿಜೆಪಿಗೆ ನೀವೇ ತಕ್ಕ ಪಾಠ ಕಲಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.