ADVERTISEMENT

ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್ ವಂಚನೆ: ನಾರಾಯಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:19 IST
Last Updated 3 ಮೇ 2024, 14:19 IST

ರಾಯಚೂರು: ‘ಗ್ಯಾರಂಟಿಗಳ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ದೊಡ್ಡ ಮೋಸ ಮಾಡುತ್ತಿದೆ. ಈ ಸತ್ಯವನ್ನು ಸಮುದಾಯದ ಜನರಿಗೆ ತಿಳಿಸಿ ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ಹೇಳಿದರು.

‘ಎಸ್‍ಸಿಪಿ, ಟಿಎಸ್‍ಪಿ ಹಣ ಬೇರೆ ಉದ್ದೇಶಕ್ಕೆ ಬಳಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಕಾನೂನು ರೂಪಿಸಿದ ಕಾಂಗ್ರೆಸ್ ಸರ್ಕಾರ ಈಗ ಎಸ್‍ಸಿಪಿ, ಟಿಎಸ್‍ಪಿಗೆ ಮೀಸಲಿಟ್ಟಿದ್ದ ₹11,500 ಕೋಟಿ ಗ್ಯಾರಂಟಿಗೆ ಬಳಸಿದೆ’ ಎಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ದೂರಿದರು.

‘ಬಜೆಟ್ ಬಳಿಕವೂ ₹14 ಸಾವಿರ ಕೋಟಿ ಬಳಸಿಕೊಳ್ಳಲು ಮುಂದಾಗಿದೆ. ಅಂಬೇಡ್ಕರ್, ವಾಲ್ಮೀಕಿ, ಆದಿ ಜಾಂಬವ, ಭೋವಿ ಅಭಿವೃದ್ಧಿ ನಿಗಮಗಳಿಗೆ ನೀಡುತ್ತಿದ್ದ ಸಬ್ಸಿಡಿ ಹಣ ಸಂಪೂರ್ಣ ಕಡಿತಗೊಳಿಸಲಾಗಿದೆ. ಪ್ರತಿ ಕ್ಷೇತ್ರಕ್ಕೆ ಒಂದೇ ಗಂಗಾ ಕಲ್ಯಾಣ ನೀಡಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಮೊದಲು ಜಾರಿಗೆ ತರಲು ಮುಂದಾಗಿದ್ದೆ ಬಿಜೆಪಿ ಸರ್ಕಾರ. ಆದರೆ, ಸರ್ಕಾರ ಪತನಗೊಂಡ ಕಾರಣಕ್ಕೆ ಅದು ಜಾರಿಯಾಗಲಿಲ್ಲ. ಒಳಮೀಸಲಾತಿ ಪರ ಇದ್ದೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆನಂತರ ಉಲ್ಟಾ ಹೊಡೆದು ದಲಿತ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. 

‘ಪ್ರತಿ ಹತ್ತು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಜಾತಿ ಗಣತಿ ಮಾಡಬೇಕು. ಅಂದಾಗಲೇ ಯಾವ ಸಮುದಾಯಗಳಿಗೆ ಏನು ಸೌಲಭ್ಯ ನೀಡಬಹುದು ಎಂಬುದು ಗೊತ್ತಾಗುತ್ತದೆ. ಆದರೆ, ದಲಿತರಿಗೆ ಮೀಸಲಾತಿ ಸಿಗುತ್ತಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.