ಕವಿತಾಳ: ಹತ್ತಿ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ ಎದುರಾಗಿದೆ, ಪ್ರಸಕ್ತ ವರ್ಷ ಬರಗಾಲ ಆವರಿಸಿದ್ದರೂ ಈ ಭಾಗದಲ್ಲಿ ಅನೇಕ ರೈತರು ಹತ್ತಿ ಬೆಳೆದಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸತತ ದರ ಕಡಿಮೆಯಾಗುತ್ತಿದ್ದು, ರೈತರು ಹತ್ತಿ ಇಟ್ಟುಕೊಳ್ಳಲು ಆಗದೆ ಅತ್ತ ಮಾರಾಟ ಮಾಡಲೂ ಸಾಧ್ಯವಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಪ್ರತಿ ಕ್ವಿಂಟಲ್ ಗೆ ₹7,800ಕ್ಕೂ ಹೆಚ್ಚಿದ್ದ ಹತ್ತಿ ಬೆಲೆ ಈಗ ₹6,500ಕ್ಕೂ ಕುಸಿದಿದೆ. ಇದರಿಂದ ಅಧಿಕ ಖರ್ಚು ಮಾಡಿ ಹತ್ತಿ ಬೆಳೆದ ರೈತರಿಗೆ ನಷ್ಟ ಉಂಟಾಗಿದೆ.
‘ಈ ವರ್ಷ ಮಳೆ ಕೊರತೆಯಿಂದ ಇಳುವರಿ ನೆಲಕಚ್ಚಿದ್ದು ಒಂದೆಡೆಯಾದರೆ ದರ ಕುಸಿತ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಕಿದ ದುಡ್ಡು ಕೈಗೆ ಬರುವುದು ಅನುಮಾನವಾಗಿದೆ’ ಎನ್ನುತ್ತಾರೆ ರೈತರಾದ ಮೌಲಾಲಿ ಮತ್ತು ಗಂಗಪ್ಪ.
ದಿನೇ ದಿನೇ ದರ ಕುಸಿಯುತ್ತಿರುವ ಪರಿಣಾಮ ರೈತರಿಂದ ಹತ್ತಿ ಖರೀದಿಸಿದ ವರ್ತಕರಿಗೂ ನಷ್ಟ ಉಂಟಾಗುತ್ತಿದೆ ಎಂದು ರೈತರಿಂದ ಹತ್ತಿ ಖರೀದಿಸಿ ಬಳ್ಳಾರಿ, ಅಣ್ಣಿಗೇರಿ, ಜೇವರ್ಗಿ ಮತ್ತು ಗೋಕಾಕ ಮಾರುಕಟ್ಟೆಗೆ ಕಳುಹಿಸುವ ಪಟ್ಟಣದ ವರ್ತಕ ವೀರಭದ್ರಪ್ಪ ಗಡ್ಡಿ ಹೇಳಿದರು.
‘ಮಳೆ ಕೊರತೆಯಿಂದ ಹೆಚ್ಚಿದ ರೋಗಬಾಧೆ, ಹತ್ತಿಯ ಗುಣಮಟ್ಟ ಕುಸಿತ, ಇಳುವರಿ ಕಡಿಮೆಯಾಗಿರುವುದು, ಹತ್ತಿಯಲ್ಲಿ ಬೀಜದ ಪ್ರಮಾಣ ಕಡಿಮೆ ಇರುವುದು ಮತ್ತು ಪ್ರಮುಖವಾಗಿ ಮಿಲ್‌ಗಳಲ್ಲಿ ಕಳೆದ ವರ್ಷದ ಉತ್ತಮ ಗುಣಮಟ್ಟದ ಹತ್ತಿ ಸಂಗ್ರಹ ಸಾಕಷ್ಟು ಇರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ ಹೀಗಾಗಿ ಸತತವಾಗಿ ದರ ಕುಸಿಯುತ್ತಿದೆ’ ಎಂದು ವರ್ತಕರು ಹೇಳುತ್ತಾರೆ.
ರೈತರು ಬೆಳೆದ ಹತ್ತಿಯನ್ನು ಪ್ರತಿ ಕ್ವಿಂಟಲ್‌ಗೆ ₹10 ಸಾವಿರದಂತೆ ದರ ನಿಗದಿ ಮಾಡಿ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಬೇಕುಮುಕ್ತಾರಪಾಶಾ ಗುಡಗಿ ಕವಿತಾಳ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.