ADVERTISEMENT

ದೇವದುರ್ಗ:ಪ್ರಯಾಣಿಕರ ಆಸನದಲ್ಲಿ ಡಬ್ಬಾ ಅಂಗಡಿ

ಸಾರಿಗೆ ಇಲಾಖೆ ಕ್ರಮಕ್ಕೆ ಸಾರ್ವಜನಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 7:34 IST
Last Updated 28 ಡಿಸೆಂಬರ್ 2023, 7:34 IST
ದೇವದುರ್ಗ ಪಟ್ಟಣದ ಬಸ್ ನಿಲ್ದಾಣ ಒಳಭಾಗದಲ್ಲಿ ಡಬ್ಬಾ ಅಂಗಡಿ ಹಾಕಿರುವುದು
ದೇವದುರ್ಗ ಪಟ್ಟಣದ ಬಸ್ ನಿಲ್ದಾಣ ಒಳಭಾಗದಲ್ಲಿ ಡಬ್ಬಾ ಅಂಗಡಿ ಹಾಕಿರುವುದು   

ದೇವದುರ್ಗ: ಆದಾಯದ ನೆಪದಲ್ಲಿ ಪಟ್ಟಣದ ಬಸ್‌ ನಿಲ್ದಾಣದ ಮಧ್ಯಭಾಗದಲ್ಲಿ ಪ್ರಯಾಣಿಕರ ಆಸನಗಳನ್ನು ತೆರವುಗೊಳಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಕೆಎಂಎಫ್ ಮಿಲ್ಕ್ ಮಾರಾಟ ಅಂಗಡಿಗೆ ಅನುಮತಿ ನೀಡಿರುವುದು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬಸ್‌ ನಿಲ್ದಾಣದ ನಿರ್ಮಾಣ ವೇಳೆ ನಿರ್ಮಿಸಿದ್ದ 9 ವಾಣಿಜ್ಯ ಮಳಿಗೆಗಳ ಪೈಕಿ 3 ಮಳಿಗೆಗಳನ್ನು 6 ತಿಂಗಳ ಹಿಂದೆ ಟೆಂಡ‌ರ್‌ನಲ್ಲಿ ಪಡೆದ ವ್ಯಾಪಾರಸ್ಥರು ವಹಿವಾಟು ಮಾಡುತ್ತಿದ್ದಾರೆ. ಉಳಿದ 6 ಮಳಿಗೆಗಳು ಮತ್ತು 1 ಉಪಾಹಾರ ಹೋಟೆಲ್ ದರ ಹೆಚ್ಚಿರುವ ಕಾರಣ ಟೆಂಡ‌ರ್‌ನಲ್ಲಿ ಪಡೆಯಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ.

‘ಮಳಿಗೆ ಬಾಡಿಗೆ ದರ ಮಾಸಿಕ ₹15 ಸಾವಿರಕ್ಕಿಂತ ಹೆಚ್ಚಿದೆ. ಪ್ರತಿ ವರ್ಷ ಶೇ 5–20ರವರೆಗೆ ಹೆಚ್ಚಳವಾಗುತ್ತದೆ. ಡಬ್ಬಾ ಅಂಗಡಿಗೆ ಬಾಡಿಗೆ ದರ ₹6 ಸಾವಿರದಿಂದ ಪ್ರಾರಂಭಗೊಂಡು ವಾರ್ಷಿಕ ಶೇಕಡಾ 5–10ರಷ್ಟು ಹೆಚ್ಚಳವಾಗುತ್ತದೆ. ಮೊದಲು ನಮಗೆ ಡಬ್ಬಾ ಅಂಗಡಿಗಳಿಗೆ ಅನುಮತಿ ನೀಡಿದ್ದರೆ ನಾವೇಕೆ ಮಾಸಿಕ ₹15 ಸಾವಿರದಿಂದ ₹20 ಸಾವಿರ ಕೊಟ್ಟು ಮಳಿಗೆ ಬಾಡಿಗೆ ಪಡೆಯುತ್ತಿದ್ದೆವು. ಇದು ನಮ್ಮ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ’ ಎಂಬುದು ವ್ಯಾಪಾರಸ್ಥರ ಅಳಲು.

ADVERTISEMENT

‘ಡಬ್ಬಾ ಅಂಗಡಿಗೆ ಅನುಮತಿ ಜಿಲ್ಲಾಮಟ್ಟದ ಅಧಿಕಾರಿಗಳ ನಿರ್ಧಾರ’ ಎನ್ನುತ್ತಾರೆ ದೇವದುರ್ಗ ಘಟಕ ವ್ಯವಸ್ಥಾಪಕ ರಾಜಶೇಖರ.

ಬಸ್‌ ನಿಲ್ದಾಣದಲ್ಲಿ ಜಾಗದ ಕೊರತೆ ಇದೆ. ಕಳೆದ ಮೂರು ವರ್ಷದ ಹಿಂದೆ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಸಾರಿಗೆ ಸಿಬ್ಬಂದಿ ಎರಡು ಬಸ್‌ಗಳ ಮಧ್ಯೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿತ್ತು.

ಸಾರಿಗೆ ಇಲಾಖೆ ಜಿಲ್ಲಾ ಅಧಿಕಾರಿ ಅನುಮತಿ ನೀಡಿದ ಆದೇಶ ಪತ್ರದಲ್ಲಿ ಬಸ್ ನಿಲ್ದಾಣ ಆವರಣದಲ್ಲಿ ಎಂದು ಉಲ್ಲೇಖಿಸಿದ್ದಾರೆ. ಆದರೆ ಆಸನಗಳನ್ನು ತೆರವುಗೊಳಿಸಿ ಮಧ್ಯಭಾಗದಲ್ಲಿ ಇಟ್ಟಿರುವುದು ವಿವಿಧ ಕನ್ನಡಪರ ಸಂಘಟನೆ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

‘ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಳಿಗೆಗೆ ಬೀಗ ಜಡಿದು ಕಡಿಮೆ ದರಕ್ಕೆ ಡಬ್ಬಾ ಅಂಗಡಿಗೆ ಅನುಮತಿ ನೀಡಿದರೆ ಮಳಿಗೆಗಳು ಹಾಗೆ ಖಾಲಿ ಬೀಳುತ್ತವೆ. ಬಸ್‌ ನಿಲ್ದಾಣದ ಮಧ್ಯ ಭಾಗದಲ್ಲಿ ಅಲ್ಪಸ್ವಲ್ಪ ಖಾಲಿ ಜಾಗವಿದ್ದು, ಆಸನಗಳ ಕೊರತೆ ಹಿನ್ನೆಲೆ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳಬೇಕಾ?’ ಎಂಬುದು ಪ್ರಯಾಣಿಕ ಆಕ್ರೋಶ.

‘ಬಸ್ ನಿಲ್ದಾಣದ ಮುಂಭಾಗದಲ್ಲಿನ ಇಲಾಖೆ ಸ್ವಾಮ್ಯದ ಜಾಗದಲ್ಲಿರುವ 30ಕ್ಕೂ ಹೆಚ್ಚು ಡಬ್ಬಾ ಅಂಗಡಿಗಳಿಂದ ಬಾಡಿಗೆ ಪಡೆಯಲಿ. ಮಿಲ್ಕ್ ಪಾರ್ಲರ್‌ಗಳಿಗೆ ಬಸ್ ನಿಲ್ದಾಣದ ನಾಲ್ಕು ದಿಕ್ಕುಗಳಲ್ಲಿ ಅಥವಾ ಸಿರವಾರ ಮಾನ್ವಿ ಬಸ್ ನಿಲ್ಲುವ ತಡೆಗೋಡೆಯ ಹತ್ತಿರ ಡಬ್ಬಾ ಅಂಗಡಿಗೆ ಅವಕಾಶ ನೀಡಲಿ. ಅದನ್ನು ಬಿಟ್ಟು ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ ಇಡುವುದು ಸರಿಯಲ್ಲ. ವಾರದ ಒಳಗಡೆ ಡಬ್ಬಾ ತೆರವುಗೊಳಿಸದಿದ್ದಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಗೌಡ ಕೆ ಇರಬಗೇರಾ ಎಚ್ಚರಿಸಿದ್ದಾರೆ.

ಸಾರಿಗೆ ಇಲಾಖೆ ರಾಯಚೂರು ಜಿಲ್ಲಾ ಅಧಿಕಾರಿ ಚಂದ್ರಶೇಖರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ನಮಗೆ ಆದಾಯ ಮುಖ್ಯ. ಆದಾಯದ ದೃಷ್ಟಿಯಿಂದ ಡಬ್ಬಾ ಅಂಗಡಿಗೆ ಅನುಮತಿ ನೀಡಿದ್ದೇವೆ. ಪ್ರಯಾಣಿಕರಿಗೆ ಆಸನದನ ವ್ಯವಸ್ಥೆ ಮಾಡುತ್ತೇವೆ’ ಎಂದರು.

ದೇವದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.