ಲಿಂಗಸುಗೂರು: ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳಕಿನ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಮನೆ, ಅಂಗಡಿ, ಮನೆಗಳನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಿ ಪೂಜಾ ಕಾರ್ಯಕ್ಕೆ ಜನ ಸಜ್ಜಾಗಿದ್ದಾರೆ.
ಗುರುವಾರದಿಂದ ಮೂರು ದಿನ ನರಕ ಚತುರ್ದಶಿ, ಲಕ್ಷ್ಮಿಪೂಜೆ, ಬಲಿಪಾಡ್ಯ ಆಚರಣೆ ನಡೆಯುತ್ತವೆ. ಹೀಗಾಗಿ ಮೇನ್ ಬಜಾರ್, ದೊಡ್ಡ ಹನುಮಂತ ದೇವಸ್ಥಾನ, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮತ್ತು ಬಸವಸಾಗರ ವೃತ್ತಗಳ ಅಂಗಡಿಗಳ ಮುಂದೆ ಜನ ಖರೀದಿ ಭರಾಟೆ ಜೋರಾಗಿ ಕಂಡು ಬಂತು.
ಬಟ್ಟೆ, ಬಂಗಾರ, ತಳಿರು ತೋರಣ, ಹಣತೆ, ಹಣ್ಣು, ಪೂಜಾ ಸಾಮಗ್ರಿ ಸೇರಿ ವಾಹನಗಳ ಶೋರೂಂ ಮಾಲೀಕರು ಉತ್ಸಾಹದಿಂದ ವಹಿವಾಟು ನಡೆಸಿದರು.
ಜೋಡು ಬಾಳೆ ದಿಂಡು ₹40–₹100, ಜೋಡು ಟೆಂಗಿನ ಗರಿ ₹50–₹80, ಕುಂಬಳಕಾಯಿ ₹50–₹200, ಬಿಡಿ ಚಂಡು ಹೂವು ಕೆ.ಜಿಗೆ ₹80–₹120, ದಾಳಿಂಬೆ, ಸೀತಾಫಲ, ಪೇರಲ, ಕಿತ್ತಳೆ, ಬಾಳೆಹಣ್ಣು ಸೇರಿದಂತೆ ಪೂಜೆಗೆ ಬಳಸುವ ಹಣ್ಣು ಹೂಗಳು ದುಪ್ಪಟ್ಟು ದರದಲ್ಲಿ ಮಾರಾಟವಾದವು.
ಸ್ಥಳೀಯವಾಗಿ ಕುಂಬಾರರು ಸಿದ್ಧಪಡಿಸುವ ಹಣತೆಗಳಿಗೆ ಅಷ್ಟೊಂದು ಬೇಡಿಕೆ ಕಂಡು ಬರಲಿಲ್ಲ. ಮಹಾರಾಷ್ಟ್ರ ಮೂಲದ ಬಣ್ಣ ಬಣ್ಣದ ಪ್ರಣತಿಗಳು ದುಬಾರಿ ಆಗಿದ್ದರೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಜನತೆ ಖರೀದಿಗೆ ಆಗಮಿಸಿದ್ದರಿಂದ ವಾಹನ ಮತ್ತು ಜನದಟ್ಟನೆ ಹೆಚ್ಚಾಗಿತ್ತು.
ಪಟಾಕಿ ಮಾರಾಟ: ಸ್ಥಳೀಯ ತಾಲ್ಲೂಕು ಕ್ರೀಡಾಂಗಣದಲ್ಲಿ ತೆರೆಯಲಾದ ಐದು ಪಟಾಕಿ ಅಂಗಡಿಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ತಾಲ್ಲೂಕು ಆಡಳಿತ ಪರವಾನಿಗೆ ನೀಡಿದೆ. ಸುರುಸುರು ಕಡ್ಡಿ, ಲಕ್ಷ್ಮಿಬಾಣ, ಸಣ್ಣ ಪಟಾಕಿ ಬಾಣದ ಸರಗಳು, ರಾಕೆಟ್, ಹಾವಿನ ಬಾಣ, ಉಕ್ಕಿನಗುಳ್ಳಿ ಸೇರಿದಂತೆ ಹಸಿರು ಪಟಾಕಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು.
‘ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಏರಿಕೆ ಕಂಡಿವೆ. ಗ್ರಾಹಕರು ಚೌಕಾಸಿ ಮಾಡಿ ಖರೀದಿ ಮಾಡುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ವಹಿವಾಟು ಚೆನ್ನಾಗಿ ಆಗಿದೆ. ಮಳೆ ಬೆಳೆ ಚೆನ್ನಾಗಿ ಇದ್ದುದರಿಂದ ಗ್ರಾಹಕರು ಉತ್ಸಾಹದಿಂದ ಖರೀದಿಯಲ್ಲಿ ಭಾಗವಹಿಸಿದ್ದರು. ಬೆಲೆ ಏರಿಕೆಯಿಂದ ಲಾಭದ ಪ್ರಮಾಣ ಹೆಚ್ಚಿದೆ’ ಎಂದು ವರ್ತಕ ಗದ್ದೆಪ್ಪ ಭಜಂತ್ರಿ ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.