ADVERTISEMENT

ಎಂಎಸ್‌ಪಿ ಜಾರಿ ಮಾಡದ ಪಕ್ಷಗಳನ್ನು ಸೋಲಿಸಿ: ರಾಮಪ್ಪ

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪ್ರಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 14:12 IST
Last Updated 20 ಏಪ್ರಿಲ್ 2024, 14:12 IST
ರಾಯಚೂರಿನ ತೀನ್ ಖಂದಿಲ್ ವೃತ್ತದಲ್ಲಿ ಎಸ್‌ಯುಸಿಐ ಪಕ್ಷದ ಪ್ರಚಾರ ವಾಹನಕ್ಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಗಿರೀಶ ಚಾಲನೆ ನೀಡಿದರು
ರಾಯಚೂರಿನ ತೀನ್ ಖಂದಿಲ್ ವೃತ್ತದಲ್ಲಿ ಎಸ್‌ಯುಸಿಐ ಪಕ್ಷದ ಪ್ರಚಾರ ವಾಹನಕ್ಕೆ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಗಿರೀಶ ಚಾಲನೆ ನೀಡಿದರು   

ರಾಯಚೂರು: ‘ದೇಶದಲ್ಲಿ ರೈತರ ಉತ್ಪನ್ನಗಳಿಗೆ ಕನಿಷ್ಠ ದರ ಸಿಗುತ್ತಿಲ್ಲ. ನಿರುದ್ಯೋಗ, ಅಗತ್ಯ ವಸ್ತುಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಲು ಎಸ್‌ಯುಸಿಐ (ಕಮ್ಯುನಿಸ್ಟ್) ಬೆಂಬಲಿಸಬೇಕು’ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಮಪ್ಪ ಮನವಿ ಮಾಡಿದರು.

ಪಕ್ಷದಿಂದ ಆಯೋಜಿಸಿದ್ದ ಚುನಾವಣಾ ಪ್ರಚಾರದ ಜಾಥಾ ವಾಹನಕ್ಕೆ ಜಿಲ್ಲಾ ಘಟಕದಿಂದ ನಗರದ ತೀನ್ ಖಂದಿಲ್ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಕೇಂದ್ರ ಸರ್ಕಾರ ಉದ್ಯಮಿಗಳ ₹14 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಿದೆ. ಆ ಮೂಲಕ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದೆ. ರೈತ, ಜನ ವಿರೋಧಿ ನೀತಿಯಿಂದಾಗಿ 4 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ADVERTISEMENT

ಪಕ್ಷದ ಜಿಲ್ಲಾ ಘಟಕದ ಸದಸ್ಯ ವೀರೇಶ ಎನ್.ಎಸ್ ಮಾತನಾಡಿ, ‘ಬಿಜೆಪಿ ಆತ್ಮ ನಿರ್ಭರ ಭಾರತ ಹಾಗೂ ಮೋದಿ ಕಿ ಗ್ಯಾರಂಟಿ ಎಂಬ ಹೊಸ ಘೋಷಣೆಯೊಂದಿಗೆ ಜನಗಳಲ್ಲಿ ಮತಯಾಚನೆಗೆ ಬರುತ್ತಿದೆ. ಮೂರನೇ ಬಾರಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವು ‘ಗರೀಬಿ ಹಠಾವೊ’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಬಡತನ ನಿರ್ಮೂಲನೆ ಆಗಿಲ್ಲ. ಜನಸಾಮಾನ್ಯರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹೊಸ ಹೊಸ ಘೋಷಣೆಗಳಿಗೆ ಮರುಳಾಗದೆ ಪ್ರಜ್ಞಾವಂತರಾಗಿ ಮತದಾನ ಮಾಡಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಬಳಿಕ ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿ, ಚಂದ್ರಬಂಡಾ, ಯಾಪಲದಿನ್ನಿ, ಕಲವಲದೊಡ್ಡಿ, ವಡ್ಡೆಪಲ್ಲಿ, ಯರಗುಂಟಾ, ಸಗಮಕುಂಟ, ಶಾಖವಾದಿ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಗಿರೀಶ, ಸದಸ್ಯ ರಾಮಣ್ಣ ಎಂ., ಚನ್ನಬಸವ ಜಾನೇಕಲ್, ಅಮೋಘ, ಪೀರಸಾಬ್, ಜಾಫರ್, ಮೌನೇಶ, ನಂದಗೋಪಾಲ, ನಿತಿನ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.