ADVERTISEMENT

ರಾಯಚೂರು: ಕೊಳಗೇರಿ ಮಂಡಳಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 15:39 IST
Last Updated 5 ಜುಲೈ 2024, 15:39 IST

ರಾಯಚೂರು: ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಅನ್ಯಾಯ ಮಾಡುತ್ತಿರುವ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಮಾದಿಗ ಯುವ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ  ಮನವಿ ಸಲ್ಲಿಸಿದರು.

ನಗರದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರಿಗಾಗಿ ವಸತಿ ಯೋಜನೆ ಜಾರಿಯಲ್ಲಿದೆ. ಮನೆ ನಿರ್ಮಾಣಕ್ಕೆ ಫಲಾನುಭವಿಗಳು ₹30 ಸಾವಿರ ವಂತಿಗೆ (ಡಿಡಿ) ಮಂಡಳಿಯ ಆಯುಕ್ತರಿಗೆ ಪಾವತಿಸಿದ್ದಾರೆ. ಫಲಾನುಭವಿಗಳಿಂದ ಅರ್ಜಿ ಪಡೆದು ರಾಜ್ಯ ಕಚೇರಿಗೆ ರವಾನಿಸದೇ ಮಂಡಳಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ವಿಳಂಬ ಮಾಡುತ್ತಿದ್ದಾರೆ. ಈಗಾಗಲೇ  6 ತಿಂಗಳ ಕಳೆದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

ಮೈಕ್ರೊ ಕಂಪನಿಯ ಗುತ್ತಿಗೆದಾರ ಎಂ.ಈರಣ್ಣ ಅವರ  ಎಂಜಿನಿಯರ್ ಸೊಹೇಲ್ ಫಲಾನುಭವಿಗಳ ನಿಯೋಜಿತ ಸ್ಥಳಗಳನ್ನು ಪರಿಶೀಲಿಸದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ವಸತಿ ಯೋಜನೆಯಡಿ ವಿವಿಧ ಹಂತಗಳಲ್ಲಿ ಫಲಾನುಭವಿಗಳಿಗೆ ಹಣ ಜಮಾ ಆಗುತ್ತದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಿಮೆಂಟ್, ಇಟ್ಟಿಗೆ, ಕಬ್ಬಿಣದ ಸಾಮಾಗ್ರಿ ಖರೀದಿಸಲಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಫಲಾನುಭವಿಗಳಾದ ಹುಚ್ಚಪ್ಪ, ಎಂ ಕರಿಯಪ್ಪ, ಉದಯ ಕುಮಾರ, ಶಿವನಂದ ನರಸಪ್ಪ, ಶೇಖರ್ ಫಿರಂಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.