ಹಟ್ಟಿ ಚಿನ್ನದ ಗಣಿ: ಪಟ್ಟಣ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯ ಮೇದಿನಾಪೂರ, ಕೋಠಾ, ಯಲಗಟ್ಟಾ, ಆನ್ವರಿ, ನಿಲೋಗಲ್, ಗೆಜ್ಜಲಗಟ್ಟಾ, ಪೈಡೊಡ್ಡಿ, ಯರಜಂತಿ, ಮಾಚನೂರು, ಗೌಡೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಕಾರ್ಮಿಕರು ಸಿಗುತ್ತಿಲ್ಲ. ಕೃಷಿ ಕಾರ್ಮಿಕರು ಸಿಗದ ಕಾರಣ ಮುಂಗಡ ಹಣ ಕೊಟ್ಟು ಕಾರ್ಮಿಕರನ್ನು ಕಳೆ ಕೀಳಲು, ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ ರೈತರು.
ಪುರುಷರು ಮಹಿಳೆಗಿಂತ ಕಮ್ಮಿ ಇಲ್ಲ ಎಂಬಂತೆ ಗಳೆ, ಕುಂಟೆ ರಂಟಿ, ಔಷಧ ಸಿಂಪಡಣೆ ಮಾಡಲು ಒಂದು ತಾಸಿಗೆ 600 ರಿಂದ ₹ 700 ನಿಗದಿ ಪಡಿಸಿದ್ದಾರೆ. ಬಿತ್ತನೆ ಕಾರ್ಯಕ್ಕೆ ₹ 1000 ದಿಂದ ₹1,500 ಕೂಲಿ ನಿಗದಿ ಪಡಿಸಲಾಗಿದೆ. ಇನ್ನಿತರ ಕೆಲಸಕ್ಕೆ ದಿನಕ್ಕೆ ₹ 250ರಿಂದ ₹ 300 ಕೂಲಿ ನಿಗದಿ ಮಾಡಿದ್ದಾರೆ. ಗ್ರಾಮದಿಂದ ಗ್ರಾಮಕ್ಕೆ ಹೋಗಬೇಕಾದರೆ ಅದರ ಖರ್ಚನ್ನು ಜಮೀನು ಮಾಲೀಕರೇ ನೀಡಬೇಕು ಎನ್ನುತ್ತಾರೆ ಕೃಷಿ ಮಹಿಳೆಯರು.
ತೊಗರಿ ಹತ್ತಿ, ಬಿತ್ತನೆ ಮಾಡಿದ ರೈತರು ಕೃಷಿ ಕಾರ್ಮಿಕರು ಸಿಗದ ಕಾರಣ ಹೊಲದಲ್ಲಿ ಕಸವನ್ನು ಹಾಗೆ ಬಿಟ್ಟಿದ್ದಾರೆ. ದೊಡ್ಡ ದೊಡ್ಡ ಜಮೀನು ಮಾಲೀಕರಿಗೆ ಕೆಲಸಗಾರರು ಸಿಗದೆ ಇರುವುದಿಂದ ಬೇರೆ ಊರುಗಳಿಂದ ಜನರನ್ನು ಕರೆಸಿ ಕಳೆ ಕೀಳಲು ಹಚ್ಚುತ್ತಿದ್ದಾರೆ ಎನ್ನುತ್ತಾರೆ ಹೊಸೂರಿನ ರೈತ ಶಿವಣ್ಣ ವಂದಲಿ.
‘ಕೃಷಿ ಯಂತ್ರಗಳನ್ನು ಬಳಕೆ ಮಾಡಿಕೊಂಡರೆ ಯಂತ್ರದ ಗಾಲಿಗೆ ಮೊಳಕೆ ಬಂದ ಸಸಿಗಳು ಹಾನಿಯಾಗುತ್ತವೆ. ಹಾಗಾಗಿ ಮನುಷ್ಯರಿಂದ ಮಾತ್ರ ಕಳೆ ಕೀಳಬೇಕಾಗುತ್ತದೆ. ಕಾರ್ಮಿಕರು ಸಿಗದೆ ಇರುವುದರಿಂದ ಮನೆಯವರೇ ಕಳೆ ಕೀಳುತ್ತಿದ್ದೇವೆ’ ಎನ್ನುತ್ತಾರೆ ರೈತ ಅಂಬಣ್ಣ.
‘ತಾಂಡಾದ ಜನರು ಬೇರೆ ಗ್ರಾಮದಿಂದ ಬಂದು ಮಧ್ಯಾಹ್ನದ ವೇಳೆಗೆ ಹೋಗುತ್ತಾರೆ. ಸ್ದಳೀಯ ಕಾರ್ಮಿಕರು ಸಂಜೆವರೆಗೂ ಕೆಲಸ ಮಾಡುತ್ತಾರೆ. ಕೃಷಿ ಕಾರ್ಮಿಕರು ಇಲ್ಲದ ಕಾರಣ ಬಹು ಬೇಡಿಕೆಯಾಗಿದೆ. ಜನರು ದೊಡ್ಡ ದೊಡ್ಡ ನಗರಕ್ಕೆ ಗುಳೆ ಹೋಗಿದ್ದಕ್ಕೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ರೈತರು.
ಕಾರ್ಮಿಕರು ಸಿಗದ ಕಾರಣ ಬೇರೆ ಗ್ರಾಮದಿಂದ ಜನರನ್ನು ಕರೆಸಿ ಕಳೆ ಕೀಳಿಸುತ್ತಿದ್ದೇವೆ. ಈ ಭಾಗದ ಜನರು ಗುಳೆ ಹೋಗಿದ್ದರಿಂದ ಕೃಷಿ ಕಾರ್ಮಿಕರ ಅಭಾವ ಜಾಸ್ತಿಯಾಗಿದೆ. ಇದರಿಂದ ದೊಡ್ಡ ಹಿಡುವಳಿದಾರರಿಗೆ ತೊಂದರೆಯಾಗಿದೆ.ವಿನಾಯಕ, ಸರ್ಜಾಪುರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.