ಕವಿತಾಳ: ಅಮೀನಗಡ ಗ್ರಾಮದ ರೈತ ಗಂಗಪ್ಪ ಕಾರಟಗಿ ಅವರು ಬೆಳೆದ ರಾಸಾಯನಿಕ ಮುಕ್ತ ಸೀತಾಫಲ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಕವಿತಾಳ, ಮಸ್ಕಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಹಣ್ಣಿನ ರುಚಿಯನ್ನು ಸವಿಯುತ್ತಿದ್ದಾರೆ.
4 ಗುಂಟೆ ಸ್ವಂತ ಜಮೀನಿನಲ್ಲಿ ಎನ್‌ಎಂಕೆ ಗೋಲ್ಡ್ 1 ತಳಿಯ 100 ಸಸಿಗಳನ್ನು ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದ ಗಂಗಪ್ಪ ಈ ವರ್ಷ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಕಳೆದ 1 ತಿಂಗಳಲ್ಲಿ 1.5 ಕ್ವಿಂಟಲ್ ಹಣ್ಣು ಮಾರಾಟ ಮಾಡಿದ್ದಾರೆ, ಮುಂದಿನ ಒಂದೂವರೆ ತಿಂಗಳ ಅವಧಿಯಲ್ಲಿ ಅಂದಾಜು 3.5 ಕ್ವಿಂಟಲ್ ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ʼಸುಗಂಧರಾಜ ಹೂವು ಮತ್ತು ಮಾಗಾನೆ ನಡುವೆ ಸೀತಾಫಲ ನಾಟಿ ಮಾಡಿದ್ದಾರೆ ಅವುಗಳಿಗೆ ಜೀವಾಮೃತ ಮತ್ತು ಎರೆಹುಳು ಗೊಬ್ಬರ ಹೊರತುಪಡಿಸಿ ಯಾವುದೇ ರಸಗೊಬ್ಬರ, ರಾಸಾಯನಿಕ ಮತ್ತು ಕ್ರಿಮಿನಾಶಕ ಬಳಸಿಲ್ಲ. ಹೀಗಾಗಿ ಹಣ್ಣು ರಸಭರಿತವಾಗಿದ್ದು ಹೆಚ್ಚಿನ ಸಿಹಿ ಜತೆ ಸ್ವಾದಿಷ್ಟವಾಗಿದೆʼ ಎಂದು ಗಂಗಪ್ಪ ಹೇಳಿದರು.
’ಸೀತಾಫಲ ಹಣ್ಣು ಮಾಡಲು ಯಾವುದೇ ರಾಸಾಯನಿಕ ಬಳಸದೆ ಗಿಡದಲ್ಲಿಯೇ ಸ್ವಾಭಾವಿಕವಾಗಿ ಮಾಗಿದ ನಂತರ ಅವುಗಳನ್ನು ಕಿತ್ತು (ಗೋಣಿ) ಸೆಣಬಿನ ಚೀಲದಲ್ಲಿ ಮುಚ್ಚಿಟ್ಟು ಹಣ್ಣು ಮಾಡಲಾಗುತ್ತಿದೆ. ಪ್ರತಿದಿನದ ಬೇಡಿಕೆ ಆಧರಿಸಿ ಹಣ್ಣುಗಳನ್ನು ಕೀಳಲಾಗುವುದು. ಪ್ರತಿ ಒಂದು ಕೆ.ಜಿ. ಗೆ ₹100 ರಂತೆ ನಿತ್ಯ 20 ಕೆ.ಜಿ. ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ, ಅಂದಾಜು 5 ಕ್ವಿಂಟಲ್ ನಿರೀಕ್ಷೆ ಇದೆ. ಸಸಿ ಖರೀದಿ, ನಾಟಿ ಮತ್ತು ಎರೆಹುಳು ಗೊಬ್ಬರ ಹಾಗೂ ಜೀವಾಮೃತ ಸೇರಿ ₹15 ಸಾವಿರ ಖರ್ಚು ಮಾಡಿದ್ದೇನೆ, ಅಂದಾಜು ₹35 ಸಾವಿರ ಲಾಭದ ನಿರೀಕ್ಷೆ ಇದೆʼ ಎಂದು ರೈತ ಗಂಗಪ್ಪ ಹೇಳಿದರು.
‘ಹಣ್ಣು ಗಾತ್ರದಲ್ಲೂ ಚೆನ್ನಾಗಿದೆ ಬೀಜ ಕಡಿಮೆ ಇದೆ ಹಣ್ಣು ಬಾಯಿಗಿಟ್ಟರೆ ಬೆಣ್ಣೆಯಂತೆ ಬಾಸವಾಗುತ್ತದೆ ಸಿಹಿ ಅದ್ಬುತʼ.-ಅಮರಪ್ಪ ಹಡಪದ, ಅಮೀನಗಡ
ಎರಡು ಮೂರು ದಿನಗಳಿಗೊಮ್ಮೆ ಅವರ ಜನೀಮಿಗೆ ಹೋಗಿ ಸೀತಾಫಲ ಖರೀದಿಸುವೆ ಓಣಿಗಳಲ್ಲಿ ಮಹಿಳೆಯರು ನೋಡಿದರೆ ನಮ್ಮಿಂದ ಪಡೆದು ನೀವು ಬೇರೆ ಖರೀದಿಸಿ ಎಂದು ದುಡ್ಡು ಕೊಡುತ್ತಾರೆ ಅಷೊಂದು ಬೇಡಿಕೆ.–ವಿರೇಶ, ಅಮೀನಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.