ರಾಯಚೂರು: ಸಚಿವ ಶಿವಾನಂದ ಪಾಟೀಲ ರೈತರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದು ರಾಜ್ಯ ಸರ್ಕಾರ ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.
ಈ ಹಿಂದೆ ಶಿವಾನಂದ ಪಾಟೀಲ ₹5 ಲಕ್ಷ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿ ಅವಮಾನ ಮಾಡಿದ್ದರು. ಈಗ ಪರಿಹಾರಕ್ಕಾಗಿ ರೈತರು ಬರಗಾಲ ಬರಲಿ ಎಂದು ಹೇಳಿಕೆ ನೀಡಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರಿಗೆ ಬುದ್ಧಿವಾದ ಹೇಳುವ ಬದಲು ಅವಮಾನಕರ ಅರ್ಥದಲ್ಲಿ ಹೇಳಿಲ್ಲ ಎಂದು ಸಮರ್ಥಿಸಿಕೊಂಡಿರುವುದು ಸರಿಯಲ್ಲ ಎಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಪ್ರತಿ ಎಕರೆಗೆ ₹1ರಿಂದ ₹1.50 ಲಕ್ಷ ಖರ್ಚು ಮಾಡಿದ್ದಾರೆ. ಡಿಸೆಂಬರ್ ಅಂತ್ಯದ ವರೆಗೆ ನೀರು ಹರಿಸುವುದಾಗಿ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ತೀರ್ಮಾನ ಏಕ ಪಕ್ಷೀಯವಾಗಿದೆ. ಈ ಸಭೆಗೆ ರೈತ ಮುಖಂಡರನ್ನು, ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು, ವಿಜ್ಞಾನಿಗಳನ್ನು ಆಹ್ವಾನಿಸದೇ ಅವೈಜ್ಞಾನಿಕವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಸಮಾಧಾನ ತೋಡಿಕೊಂಡರು.
ಫೆಬ್ರುವರಿ ಅಂತ್ಯದ ವರೆಗೆ ತುಂಬಭದ್ರಾ ಎಡದಂಡೆ ಕಾಲುವೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆ ಸೇರಿ ಅಂದಾಜು ₹400 ಕೋಟಿ ಬೆಳೆ ನಷ್ಟವಾಗಲಿದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಪಾಟೀಲ, ದೇವರಾಜ ನಾಯಕ, ಬೂದಯ್ಯ ಸ್ವಾಮಿ, ಬಸವರಾಜ, ಗೋಕುಲ್ ಸಾಬ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.