ಡಿ.ಯದ್ಲಾಪುರ (ಶಕ್ತಿನಗರ): ಶುದ್ಧ ಕುಡಿಯುವ ನೀರು ಪೂರೈಸಬೇಕು. ಕೆಲವೆಡೆ ಹಾಳಾಗಿರುವ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ತುರ್ತಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು...
ಇಲ್ಲಿನ ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ರಾಮಪ್ಪ ಡೋಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಬಂದ ಪ್ರಮುಖ ವಿಷಯಗಳಿವು.
ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತಮ್ಮ ಅವರು, ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆರಂಭದಲ್ಲಿಯೇ ಅಧ್ಯಕ್ಷ ರಾಮಪ್ಪ ಡೋಣಿ ಅವರು ಮಾತನಾಡಿ, ‘ ಪ್ರತಿಯೊಂದು ಇಲಾಖೆಯ ಯೋಜನೆಗಳ ಕುರಿತು, ಗ್ರಾಮ ಪಂಚಾಯಿತಿ ಸದಸ್ಯರಿಗೆ ತಲುಪುತ್ತಿಲ್ಲ. ಅವರಿಗೆ ಮನಮುಟ್ಟುವಂತೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದಾಗ, ಜನರಿಗೆ ಆ ಯೋಜನೆಗಳ ಮಾಹಿತಿ ತಲುಪಲು ಸಾಧ್ಯ’ ಎಂದರು.
ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳು ಶಾಲೆ ಬಿಟ್ಟು ಹೊರಗೆ ಉಳಿದಿದ್ದರೆ, ಅಂತಹವರ ಮನೆ ಮನೆಗೆ ಭೇಟಿ ನೀಡಿ ಮನವೊಲಿಸಿ ಅವರನ್ನು ಮರಳಿ ಶಾಲೆಗೆ ಕರೆ ತರಬೇಕು.
ಒಂದು ವೇಳೆ ಮಕ್ಕಳು ಶಾಲೆಗೆ ಬಾರದೆ ಇದ್ದಲ್ಲಿ ಅಂತಹ ಮಕ್ಕಳ ಪಾಲಕರಿಗೆ ನೋಟಿಸ್ ನೀಡಿ ಎಂದು ಸೂಚನೆ ನೀಡಿದರು.
ಪ್ರಾಥಮಿಕ ಶಾಲೆಗಳ ಎಸ್‌ಡಿಎಂಸಿ ಸಮಿತಿಗೆ 18 ಸಾವಿರ ಅನುದಾನ ಬಂದಿದೆ. ಆದರೆ, ಪ್ರೌಢಶಾಲಾ ಸಮಿತಿಗೆ ಅನುದಾನ ಬರುತ್ತಿಲ್ಲ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ, ಸಿಲಿಂಡರ್‌ಗಳ ಕೊರತೆ, ಕಸದ ತೊಟ್ಟಿಗಳ ವ್ಯವಸ್ಥೆ ಮಾಡಬೇಕು. ಅಗತ್ಯ ಬಿಸಿಯೂಟ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಸಭೆಯ ಗಮನ ಸೆಳೆದರು.
ವಡ್ಲೂರು, ಗಂಜಳ್ಳಿ, ಹನುಮನದೊಡ್ಡಿ , ಹೆಗ್ಗಸನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲಿಯ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಅಲ್ಲದೆ, ಡಿ.ಯದ್ಲಾಪುರ ಮತ್ತು ಎಂಪಿಸಿಎಲ್ ಕಾಲೊನಿಯಲ್ಲಿ ವಿದ್ಯುತ್ ಕಂಬಗಳು ಹಾಳಾಗಿವೆ. ವೈರ್‌ಗಳು ಜೋತು ಬಿದ್ದಿವೆ. ಅವುಗಳನ್ನು ದುರಸ್ತಿಗೊಳಿಸಿ ಅನುಕೂಲ ಮಾಡಿಕೊಡಬೇಕು
ಕೆಡಿಪಿ ಸಭೆಗೆ ಗೈರಾದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡಬೇಕು ಎಂದು ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಡೋಣಿ ಸೂಚಿಸಿದರು.
ಸಭೆಯಲ್ಲಿ ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ ಹನುಮಂತ ಗಂಜಳ್ಳಿ, ದೇವಸೂಗೂರು ಹೋಬಳಿ ರೈತ ಸಂಪರ್ಕ ಕೇಂದ್ರದ ಕೃಷಿ ಸಹಾಯಕ ಅಧಿಕಾರಿ ಜಯಶ್ರೀ ವಸ್ತ್ರದ್ , ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಎಸ್.ಜಿ.ಕಣ್ಣೂರ್ , ಪಂಚಾಯತಿ ರಾಜ್ ಅಧಿಕಾರಿ ಚಂದ್ರಕಲಾ , ರೇಷ್ಮೆ ಇಲಾಖೆ ಅಧಿಕಾರಿ ನರಸಪ್ಪ, ಪಶು ಇಲಾಖೆ ಅಧಿಕಾರಿ ಮಹಾದೇವಪ್ಪ, ಜೆಸ್ಕಾಂ ಇಲಾಖೆ ಅಧಿಕಾರಿ ಪ್ರಕಾಶ , ಗ್ರಂಥಾಲಯ ಮೇಲ್ವಿಚಾರಕ ಶ್ರೀನಿವಾಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.