ರಾಯಚೂರು: ‘ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ನಾಯಕರು ಶಿಫಾರಸು ಮಾಡಿದ್ದರೂ ರಾಜ್ಯದ ಕೆಲವು ನಾಯಕರು ಕತ್ತರಿ ಹಾಕಿದ್ದಾರೆ. ನಾಲ್ಕು ಬಾರಿ ಶಾಸಕನಾಗಿ, ಪಕ್ಷಕ್ಕೆ ನಿಷ್ಠನಾಗಿದ್ದರೂ ನನಗೆ ಸಚಿವ ಸ್ಥಾನ ಸಿಗಲಿಲ್ಲ’ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅಸಮಾಧಾನ ಹೊರಹಾಕಿದರು.
ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ. ಪರಿಶಿಷ್ಟ ಪಂಗಡಕ್ಕೆ ಕನಿಷ್ಠ ಮೂರು ಸ್ಥಾನ ನೀಡಬೇಕಿತ್ತು. ರಮೇಶ ಜಾರಕಿಹೊಳಿ ಅವರಿಗೆ ಎಸ್‌ಟಿ ಕೋಟಾದಲ್ಲಿ ಸಚಿವಸ್ಥಾನ ನೀಡುವುದಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಹೀಗಾಗಿ ಅವರಿಗೆ ಸಚಿವಸ್ಥಾನ ನೀಡಲೇಬೇಕು’ ಎಂದು ತಿಳಿಸಿದರು.
‘ಎಸ್‌ಟಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾಗಿ ಹಾಗೂ ಪ್ರಾದೇಶಿಕ ಅಸಮತೋಲನೆ ನಿರಾರಿಸಲು ಎಸ್‌ಟಿ ಶಾಸಕರಿಗೆ ಸಚಿವಸ್ಥಾನ ನೀಡಲೇಬೇಕು. ನೂತನ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು, ಅನ್ಯಾಯವನ್ನು ಸರಿಪಡಿಸುವ ವಿಶ್ವಾಸವಿದೆ. ಅವಧಿ ಪೂರ್ಣವಾಗುವವರೆಗೂ ಅಧಿಕಾರ ನಡೆಸಲು ಮುಖ್ಯಮಂತ್ರಿ ಸಮರ್ಥರಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.