ADVERTISEMENT

ಮೋದಿ ಅಲೆಗೆ ಕಿವಿಗೊಡದ ಮತದಾರ; ’ಕೈ’ ಹಿಡಿದ ದೇವದುರ್ಗ ಮತದಾರರು 

ಸ್ಥಳೀಯರಿಗೆ ಆದ್ಯತೆ

ವೆಂಕಟೇಶ ಪಾಟೀಲ
Published 29 ಮೇ 2019, 19:30 IST
Last Updated 29 ಮೇ 2019, 19:30 IST
ಶಿವನಗೌಡ ನಾಯಕ
ಶಿವನಗೌಡ ನಾಯಕ   

ರಾಯಚೂರು ಲೋಕಸಭೆ/ ದೇವದುರ್ಗ ವಿಧಾನಸಭೆ ಕ್ಷೇತ್ರದ ವಿಮರ್ಶೆ

ದೇವದುರ್ಗ: ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ದೇವದುರ್ಗ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಸ್ಥಳೀಯ ಅಭ್ಯರ್ಥಿಯಾಗಿದ್ದ ಬಿ.ವಿ. ನಾಯಕ ಅವರಿಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಮೋದಿ ಅಲೆಗೆ ಮತದಾರರು ಮನಸೋತಿಲ್ಲ.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಶಿವನಗೌಡ ನಾಯಕ ಅವರು ಗೆಲುವು ಸಾಧಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಶೇಖರ ನಾಯಕ ಅವರು ಸುಮಾರು 20 ಸಾವಿರ ಮತಗಳ ಅಂತದಿಂದ ಸೋಲನ್ನು ಕಂಡಿದ್ದರು. ಆದರೆ ಕ್ಷೇತ್ರದ ಮತದಾರರು ಒಂದೇ ವರ್ಷದಲ್ಲಿಯೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ 5,361 ಹೆಚ್ಚು ಮತ ನೀಡಿದ್ದರೆ. ಈ ಮೂಲಕ ಇಡೀ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಏಕೈಕ ದೇವದುರ್ಗ ಕ್ಷೇತ್ರ ಕಾಂಗ್ರೆಸ್ ಪರವಾಗಿ ನಿಂತಿದೆ.

ADVERTISEMENT

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಸಿಗುಗವುದಕ್ಕೆ ಶಾಸಕ ಕೆ. ಶಿವನಗೌಡ ನಾಯಕ ಪರಿಶ್ರಮವೂ ಕಾರಣ ಎಂದು ಹೇಳಲಾಗುತ್ತಿದೆ. ತಾವು ಆಯ್ಕೆ ಮಾಡಿ ಕಣದಲ್ಲಿ ಗಟ್ಟಿಯಾಗಿ ನಿಲ್ಲಲು ಕಾರಣರಾಗಿದ್ದ ಶಿವನಗೌಡ ನಾಯಕ ಅವರು ತಮ್ಮ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ಬರುವಂತೆ ಮಾಡದೆ ಇರುವುದು ಈಗ ಪಕ್ಷದ ಒಳಗೆ ಚರ್ಚೆಗೀಡು ಮಾಡಿದೆ.

ಪರಿಶಿಷ್ಟ ಪಂಗಡಜನರು ಹೆಚ್ಚಾಗಿದ್ದು, ನಂತರದ ಸ್ಥಾನದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಜನಾಂಗದ ಮತದಾರರು ಇದ್ದಾರೆ. ಸ್ಥಳೀಯರು ಎಂಬ ಕಾರಣಕ್ಕಾಗಿ ಬಿ.ವಿ.ನಾಯಕರಿಗೆ ಮತ ಹಾಕಿರುವುದು ಒಂದು ಕಡೆಯಾದರೆ ಶಾಸಕ ಕೆ. ಶಿವನಗೌಡ ನಾಯಕ ಅವರು ತಮ್ಮ ಹತ್ತಿರದ ಸಂಬಂಧಿಯಾಗಿರುವ ಬಿ.ವಿ. ನಾಯಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಆರೋಪಿಗಳಿಗೆ ಶಾಸಕ ಶಿವನಗೌಡ ನಾಯಕ ಅವರು ಮೌನವಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಶಾಸಕ ಕೆ. ಶಿವನಗೌಡ ನಾಯಕ ಅವರು ತಮ್ಮ ಪ್ರಚಾರದ ಭಾಷಣದಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಸುಮಾರು 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇದು ಸುಳ್ಳಾದರೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ ಎಂಬ ಹೇಳಿಕೆ ಈಗ ನಿಜವಾಗಿದ್ದರೂ ತಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬರದೆ ಇರುವುದು ಈಗ ಪಕ್ಷ ಮತ್ತು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜಾ ಅಮರೇಶ್ವರ ನಾಯಕ ಅವರು ದೇವದುರ್ಗ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿರುವುದು ಬಹಳ ಕಡಿಮೆ. ದೇವದುರ್ಗಕ್ಕೆ ಬಂದರೂ ತಮ್ಮ ಹಿಂದಿನ ರಾಜಕೀಯ ಒಡನಾಡಿಗಳನ್ನು ಭೇಟಿಯಾಗಿ ಹೋಗಿದ್ದಾರೆ ವಿನಾ ಬಹಿರಂಗವಾಗಿ ಪ್ರಚಾರಕ್ಕೆ ಬಂದಿರಲಿಲ್ಲ.

‘ಕಳೆದ ವರ್ಷ ವಿಧಾನಸಭಾ ಚುನಾವಣೆಯ ನಂತರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪರವಾಗಿ ಜನರು ಇದ್ದಾರೆ ಎಂಬುವುದಕ್ಕೆ ಲೋಕಸಭಾ ಚುನಾವಣೆಯೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಮೂಲಕ ಮುಂದಿನ ಚುನಾವಣೆಗೆ ಮತದಾರರಿಗೆ ವಿಶ್ವಾಸಕ್ಕೆ ಬರುವಂತೆ ಶ್ರಮಿಸುತ್ತೇವೆ’ ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ನಾಯಕ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.