ದೇವದುರ್ಗ: ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಕಾಮಗಾರಿಯೊಂದದರಲ್ಲಿ ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ನಾಲ್ವರು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೋಮವಾರ ಸಮನ್ಸ್ ಜಾರಿ ಮಾಡಿದೆ.
ಜಾಲಹಳ್ಳಿ ಪಟ್ಟಣದ ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ಹಾಗೂ ವಕೀಲ ರಾಜಾ ವಾಸುದೇವ ನಾಯಕ ನೀಡಿದ ದೂರಿನ ಆಧಾರ ಮೇರೆಗೆ ಜಾಲಹಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಪಿಡಿಒ ಮಹೇಶ್ವರಿ, ತಾ.ಪಂ ಇಒ ಬಸವರಾಜ ಹಟ್ಟಿ, ತಾ.ಪಂ. ಯೋಜನಾ ನಿರ್ದೇಶಕ ಅಣ್ಣರಾವ್ ನಾಯಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಣಾಧಿಕಾರಿಗೆ ಸಮನ್ಸ್ ಜಾರಿ ಮಾಡಿ ಅ.18 ರಂದು ರಾಯಚೂರಿನ ಸರ್ಕಾರಿ ವೀಕ್ಷಣಾಲಯ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
‘ನರೇಗಾ ಕಾಮಗಾರಿಯೊಂದರಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಎನ್‌ಎಂಎಂಎಸ್ ತಂತ್ರಾಂಶದಲ್ಲಿ ಹಾಜರಾತಿ ಹಾಕಿರುವ ಬಗ್ಗೆ ಏಪ್ರಿಲ್ 6 ರಂದು ಬಾಲಕರ ಭಾವಚಿತ್ರ ಸಮೇತವಾಗಿ ಅಪ್ ಲೋಡ್ ಮಾಡಲಾಗಿದೆ’ ಎಂದು ಏ.13 ರಂದು ಸಾಮಾಜಿಕ ಕಾರ್ಯಕರ್ತ ಅಮರೇಶ ನಾಯಕ ದಾಖಲೆ ಸಮೇತ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಸಮನ್ಸ್ ಜಾರಿಮಾಡಿದ್ದಾರೆ. ನರೇಗಾ ಯೋಜನೆಯಡಿ ತಾಲ್ಲೂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭಾರಿ ಅವ್ಯವಹಾರ ಮಾಡಿದ ಆರೋಪಗಳಿವೆ.
ನರೇಗಾ ಯೋಜನೆಯಡಿ ₹200 ಕೋಟಿ ಭ್ರಷ್ಟಾಚಾರ ನಡೆದು 38 ಹೆಚ್ಚು ಜನ ಅಧಿಕಾರಿಗಳು ಅಮಾನತುಗೊಂಡರೂ ಅಧಿಕಾರಿಗಳಿಗೆ ಬುದ್ಧಿ ಬಂದಿಲ್ಲ. ಜಾಲಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಮಕ್ಕಳನ್ನು ಬಳಸಿಕೊಂಡಿದ್ದೇ ಇದಕ್ಕೆ ಸಾಕ್ಷಿಯಾಗಿದೆರಾಜಾವಾಸುದೇವ ನಾಯಕ ವಕೀಲ ದೂರುದಾರ ಜಾಲಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.