ADVERTISEMENT

ದೇವದುರ್ಗ: ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸೇರಿ ಐವರ ವಿರುದ್ಧ ಎಫ್‌ಐಆರ್

ನಕಲಿ ದಾಖಲೆ ಸೃಷ್ಟಿಸಿ ಪೌತಿ ವಿರಾಸತ್ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 14:16 IST
Last Updated 16 ಅಕ್ಟೋಬರ್ 2024, 14:16 IST
ದೇವದುರ್ಗ ತಾಲ್ಲೂಕಿನ ಗಬ್ಬೂರು ಪಟ್ಟಣದ ನಾಡ ತಹಶೀಲ್ದಾರ ಕಾರ್ಯಾಲಯ ಹೊರನೋಟ
ದೇವದುರ್ಗ ತಾಲ್ಲೂಕಿನ ಗಬ್ಬೂರು ಪಟ್ಟಣದ ನಾಡ ತಹಶೀಲ್ದಾರ ಕಾರ್ಯಾಲಯ ಹೊರನೋಟ   

ದೇವದುರ್ಗ: ನಕಲಿ ದಾಖಲೆ ಸೃಷ್ಟಿಸಿ ಪೌತಿ ವಿರಾಸತ್ ಮಾಡಿದ ಆರೋಪದ ಮೇಲೆ ಗಬ್ಬೂರು ನಾಡ ತಹಶೀಲ್ದಾರ್ ಕಚೇರಿ ಉಪ ತಹಶೀಲ್ದಾರ್ ಬಸವರಾಜ, ಆರ್‌ಐಗಳಾದ ಯಂಕಪ್ಪ, ಹನುಮಂತ, ಖಾನಾಪುರ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಮತ್ತು ಮಾನ್ವಿ ತಾಲ್ಲೂಕಿನ ರಬ್ಬಣಕಲ್ ನಿವಾಸಿ ಹನುಮಂತಿ ಎಂಬುವರು ವಿರುದ್ಧ ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹೊನ್ನಟಗಿ ಗ್ರಾಮದ ನಿವಾಸಿ ಕಬ್ಬೇರ ಸಮುದಾಯಕ್ಕೆ ಸೇರಿದ ಮಲ್ಲಣ್ಣ ಅವರ ಆಸ್ತಿ ಖಾನಾಪುರ ವ್ಯಾಪ್ತಿಯ ಸರ್ವೆ ನಂ 81/*/4 ರಲ್ಲಿ 3 ಎಕರೆ 22 ಗುಂಟೆ, 82/*/2 ರಲ್ಲಿ 3 ಎಕರೆ 18 ಗುಂಟೆ, 100/*/5ರಲ್ಲಿ 3 ಎಕರೆ 6 ಗುಂಟೆ ಸೇರಿ ಒಟ್ಟು 10 ಎಕರೆ 6 ಗುಂಟೆ ಹೊಂದಿದ್ದಾರೆ.

13 ವರ್ಷದ ಹಿಂದೆ ಮಲ್ಲಣ್ಣ ಮತ್ತು ಅವರ ಪತ್ನಿ ಹನುಮಂತಿ ಮರಣ ಹೊಂದಿದ್ದಾರೆ. ಮಕ್ಕಳಿಲ್ಲದ ಕಾರಣ ಅವರ ಸೋದರಿಯರಾದ ಗೌರಮ್ಮ, ಬಸ್ಸಮ್ಮ ಮತ್ತು ಕರಿಯಮ್ಮ ಎಂಬುವವರು ಕಾನೂನಿನ ಪ್ರಕಾರ ಈ ಆಸ್ತಿಯ ವಾರಸುದಾರರಾಗುತ್ತಾರೆ. ಆದರೆ ಗಬ್ಬೂರು ಉಪ ತಹಶೀಲ್ದಾರ್ ಬಸವರಾಜ, ಕಂದಾಯ ನಿರೀಕ್ಷಕರಾದ ಯಕಂಪ್ಪ, ಹನುಮಂತ ಹಾಗೂ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ ಸೇರಿಕೊಂಡು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಹನುಮಂತೆಮ್ಮ ಮಾನ್ವಿ ತಾಲ್ಲೂಕಿನ ರಬ್ಬಣಕಲ್ ಗ್ರಾಮ ನಿವಾಸಿಯಿಂದ ಎಕರೆ ಸುಮಾರು ₹4 ಹಣ ಪಡೆದು 2021ರಲ್ಲಿ ಕೈಬರಹದ ವಂಶಾವಳಿ ಮತ್ತು 2022 ರಲ್ಲಿ ಆನ್‌ಲೈನ್‌ ಮಾದರಿ ನಕಲಿ ವಂಶಾವಳಿ ತಯಾರಿಸಿ ಮಲ್ಲಣ್ಣ ಅವರ ಆಸ್ತಿಯನ್ನು ಹನುಮಂತೆಮ್ಮ ಎಂಬುವರಿಗೆ ಪೌತಿ ವಿರಾಸತ್ ಮೇಲೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಮಾಹಿತಿ ಹಕ್ಕಿನಲ್ಲಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ಮಲ್ಲಣ್ಣ ಅವರ ಸಹೋದರಿ ಗೌರಮ್ಮ ಅವರ ಪುತ್ರ ರಂಗಪ್ಪ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಅಕ್ರಮ ಪೌತಿ ವಿರಾಸತ್ ಮಾಡಿರುವ ದಾಖಲೆಗಳನ್ನು ತಹಶೀಲ್ದಾರ್ ಮತ್ತು ಉಪತಹಶೀಲ್ದಾರ್‌ ಅವರಿಗೆ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಪರೋಕ್ಷವಾಗಿ ಇವರು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ಇದೆ. ನಮ್ಮ ಪೂರ್ವಜರ ಆಸ್ತಿಯನ್ನು ಕಾನೂನು ಹೋರಾಟ ಮಾಡಿ ಪಡೆಯುತ್ತವೆ ಎಂದು ದೂರುದಾರ ರಂಗಪ್ಪ ಬುಧವಾರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಹಾಗೂ ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತ ಗಜಾನನ ಬಳೆ ಅವರನ್ನು ಪ್ರಜಾವಾಣಿ ಸಂಪರ್ಕಿಸಿದಾಗ ಪ್ರಕರಣದ ಕುರಿತು ಉತ್ತರಿಸಲು ನಿರಾಕರಿಸಿದರು.

ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡದೆ ಪ್ರಕರಣ ದಿಕ್ಕು ಬದಲಿಸುತ್ತಿದ್ದಾರೆ ಎಂಬುದು ದೂರುದಾರರ ಆರೋಪ.

ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಪೌತಿ ವಿರಾಸತ್ ಮಾಡಿದ ಅಧಿಕಾರಿಗಳು ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳದ ತಹಶೀಲ್ದಾರ್ ನಡೆ ಆಶ್ಚರ್ಯ ತರಿಸಿದ್ದು ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ
ರಂಗಪ್ಪ ಮೃತ ಮಲ್ಲಣ್ಣ ಅವರ ಸಹೋದರಿಯ ಮಗ
5 ಜನರ ವಿರುದ್ಧ ಗಬ್ಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಗ್ಗೆ ಮಾಹಿತಿ ಇದೆ. ತನಿಖೆ ಕೈಗೊಂಡಿದ್ದು ಅಗತ್ಯ ದಾಖಲೆ ಸಂಗ್ರಹಿಸಿ ಕೋರ್ಟ್‌ ಚಾರ್ಜ್ ಶೀಟ್ ಸಲ್ಲಿಸಲಾಗುವುದು
ಪುಟ್ಟಮಾದಯ್ಯ.ಎಂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.