ADVERTISEMENT

ಜಡ್ಡುಗಟ್ಟಿದ ಆಡಳಿತ: ಹಾಳು ಬಿದ್ದ ಕಟ್ಟಡಗಳು

ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ನೆರವಾಗುವರೇ ಮುಖ್ಯಮಂತ್ರಿ

ಚಂದ್ರಕಾಂತ ಮಸಾನಿ
Published 4 ಅಕ್ಟೋಬರ್ 2024, 5:58 IST
Last Updated 4 ಅಕ್ಟೋಬರ್ 2024, 5:58 IST
ರಾಯಚೂರು ಸಮೀಪದ ಅಸ್ಕಿಹಾಳದಲ್ಲಿ ನಿರ್ಮಿಸಿದ ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡ ಪಾಳು ಬಿದ್ದಿದ್ದು, ಕಟ್ಟದ ಎದುರು ಸಂಗ್ರಹವಾಗಿರುವ ಕೊಳಚೆ ನೀರು/ ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರು ಸಮೀಪದ ಅಸ್ಕಿಹಾಳದಲ್ಲಿ ನಿರ್ಮಿಸಿದ ಜಿಲ್ಲಾಧಿಕಾರಿ ಕಚೇರಿ ಹೊಸ ಕಟ್ಟಡ ಪಾಳು ಬಿದ್ದಿದ್ದು, ಕಟ್ಟದ ಎದುರು ಸಂಗ್ರಹವಾಗಿರುವ ಕೊಳಚೆ ನೀರು/ ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಜಿಲ್ಲೆಯಲ್ಲಿ ಜಡ್ಡುಗಟ್ಟಿದ ಆಡಳಿತ ಹಾಗೂ ಹಾಳು ಬಿದ್ದ ಕಟ್ಟಡಗಳು ಜಿಲ್ಲೆಯ ವಸ್ತುಸ್ಥಿತಿಯನ್ನು ಬಿಂಬಿಸುತ್ತಿವೆ. ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕಾರಣಿಗಳ ನಿರಾಸಕ್ತಿಯಿಂದಾಗಿಯೇ ಜಿಲ್ಲೆಯ ಅಭಿವೃದ್ಧಿ ತೆವಳುತ್ತ ಸಾಗಿದೆ.

ಇಲ್ಲಿ ಅಭಿವೃದ್ಧಿಗಿಂತ ಅತಿಕ್ರಮಣವೇ ಪ್ರಧಾನವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರೀಯ ಕಾರ್ಯಕ್ರಮಗಳು ಇದ್ದಾಗ ಮಾತ್ರ ಅತಿಥಿಯಂತೆ ಬಂದು ಹೋಗುತ್ತಾರೆ. ಅವರಿಂದಾಗಿ ಜಿಲ್ಲೆಗೆ ಯಾವ ಅನುಕೂಲವೂ ಆಗಿಲ್ಲ. ಅವರಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಂಕೀರ್ಣವನ್ನೂ ಉದ್ಘಾಟನೆ ಮಾಡಿಸಲು ಸಾಧ್ಯವಾಗಿಲ್ಲ.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರು ಬೃಹತ್‌ ಕಟ್ಟಡಗಳನ್ನು ಕಟ್ಟಿ ಸರ್ಕಾರಿ ಕಚೇರಿಗಳಿಗೇ ಬಾಡಿಗೆ ಕೊಟ್ಟು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ADVERTISEMENT

‘ರಾಯಚೂರು ಹೊರವಲಯದ ಅಸ್ಕಿಹಾಳದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಿ ಮೂರು ವರ್ಷಗಳಾಗಿದೆ. ಅಲ್ಲಿಗೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಿಸುವುದು ಒಂದೆಡೆ ಇರಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕಚೇರಿಗಳನ್ನೂ ಅಲ್ಲಿಗೆ ಸ್ಥಳಾಂತರಿಸಲು ಅಧಿಕಾರಿಗಳು ಸಿದ್ಧರಿಲ್ಲ.

‘2014ರ ವರೆಗೂ ಜಿಲ್ಲೆಗೆ ಒಬ್ಬರೂ ಒಳ್ಳೆಯ ಅಧಿಕಾರಿ ಬಂದಿಲ್ಲ. ಬಂದರೂ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಹೀಗಾಗಿ ಅಭಿವೃದ್ದಿ ನಿಂತ ನೀರಾಗಿದೆ‘ ಎಂದು ಯುವಜನ ಒಕ್ಕೂಟದ ಮುಖಂಡ ಅಜೀಜ್‌ ಜಾಗೀರದಾರ್ ಬೇಸರದಿಂದ ಹೇಳುತ್ತಾರೆ.


ಸಿಟಿ ಬಸ್‌ ನಿಲ್ದಾಣ: ಮುಗಿಯದ ಕಾಮಗಾರಿ

ರಾಯಚೂರು ಜಿಲ್ಲೆ ಸಾರಿಗೆ ವ್ಯವಸ್ಥೆಯಲ್ಲೂ ಹಿಂದೆ ಬಿದ್ದಿದೆ. ರಾಯಚೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿಶೇಷ ಅಭಿವೃದ್ದಿ ಯೋಜನೆ ಮತ್ತು ಕೇಂದ್ರ ಭೂ ಸಾರಿಗೆ ಯೋಜನೆ ಅಡಿಯಲ್ಲಿ 2019–2020ರಲ್ಲಿ ಬಿಡುಗಡೆಯಾದ ₹ 18 ಕೋಟಿ ವೆಚ್ಚದಲ್ಲಿ ಹಳೆಯ ಸಾರಿಗೆ ಘಟಕ ಇದ್ದ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ನಗರ ಸಾರಿಗೆ ಬಸ್ ನಿಲ್ದಾಣ ಕಾಮಗಾರಿ ತೆವಳುತ್ತ ಸಾಗಿದೆ.

2020ರ ನವೆಂಬರ್‌ 20ರಂದು ಕಾಮಗಾರಿ ಆರಂಭವಾಗಿದೆ. 2022ರಲ್ಲಿ ಕಾಮಗಾರಿ ಮುಗಿಯಬೇಕಿತ್ತು.ಆದರೆ, ಇದರ ಪ್ರಗತಿ ಕೇಳುವವರೇ ಇಲ್ಲ. ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ ಆಸಕ್ತಿ ಇಲ್ಲ. ಮಾಧ್ಯಮವರು ವಿಚಾರಿಸಿದರೆ ಉಡಾಫೆಯ ಉತ್ತರ ಕೊಡುತ್ತಾರೆ.

ನಗರದ ವಿವಿಧ ಬಡಾವಣೆಗಳಿಗೆ ತೆರಳುವ ಪ್ರಯಾಣಿಕರು ಕೇಂದ್ರ ಬಸ್‌ ನಿಲ್ಲಾಣದ ಒಂದು ಮೂಲೆಯಲ್ಲಿ ಬಿಸಿಲಲ್ಲಿ ರಸ್ತೆ ಮೇಲೆಯೇ ನಿಲ್ಲಬೇಕಾದ ಸ್ಥಿತಿ ಇದೆ. ಪ್ರಸ್ತುತ ವಾಸವಿನಗರದಿಂದ ರೈಲು ನಿಲ್ದಾಣ, ರಿಮ್ಸ್‌ ಆಸ್ಪತ್ರೆ, ಎಲ್‌ಬಿಎಸ್‌ನಗರ, ಬೋಳಮಾನದೊಡ್ಡಿಗೆ ಮಾತ್ರ ಬಸ್‌ಗಳು ಸಂಚರಿಸುತ್ತಿವೆ.

ಅಸ್ಕಿಹಾಳ ಕಡೆಗೆ ಬಸ್‌ಗಳನ್ನು ಓಡಿಸಿದರೆ ‘ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಬ್ಬಂದಿ, ರೈತರು, ಅನೇಕ ಬಡಾವಣೆಗಳ ನಿವಾಸಿಗಳಿಗೂ ಅನುಕೂಲವಾಗಲಿದೆ. ಆದರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೂರುತ್ತಾರೆ

* * *

ಮುದಗಲ್: ಪೂರ್ಣಗೊಳ್ಳದ ಬಾಲಕಿಯರ ವಸತಿ ನಿಲಯ ಕಟ್ಟಡ:

ಮುದಗಲ್: 2020ರ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ₹2 ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿ ನಾಲ್ಕು ವರ್ಷಗಳಿಂದ ತೆವಳುತ್ತ ಸಾಗಿದೆ.

ಹೊಸ ಕಟ್ಟಡದಲ್ಲಿ 16 ಕೊಠಡಿಗಳು, ಒಂದು ಊಟದ ಹಾಲ್, ಒಂದು ಅಡುಗೆ ತಯಾರಿಸುವ ಕೊಠಡಿ ಇದೆ. ಆದರೆ, ಕೊಠಡಿಗಳಿಗೆ ಕಿಟಕಿ ಮುಚ್ಚುವ ಸಾಮಾಗ್ರಿಗಳು ಅಳವಡಿಸಿಲ್ಲ.
ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಆರು ಕೊಠಡಿಗಳಲ್ಲಿ 50 ವಿದ್ಯಾರ್ಥಿಗಳು ಇರಬೇಕಾಗಿದೆ. ಈ ವಿದ್ಯಾರ್ಥಿನಿಯರಿಗೆ ಐದು ಸ್ನಾನ ಗೃಹ, ನಾಲ್ಕು ಶೌಚಾಲಯಗಳಿವೆ. ಶೌಚ, ಸ್ನಾನಕ್ಕೆ ನಸುಕಿನ ಜಾವ ಐದು ಗಂಟೆಯಿಂದಲೇ ಪಾಳೆ ಹಚ್ಚಬೇಕಾಗಿದೆ.
ಆರು ಕೊಠಡಿಯಲ್ಲಿ ಸರ್ಕಾರದಿಂದ ನೇಮಕವಾದ ಐವತ್ತು ವಿದ್ಯಾರ್ಥಿನಿಯರು, ವಿವಿಧ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಶಿಫಾರಸಿನ ಮೂಲಕ ಅನಧಿಕೃತವಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿದ್ದು ಕೊಠಡಿಗಳು ಸಾಲುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

* * *

ಅಕ್ರಮ ಮರಳು ದಂದೆ

ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂದೆ ಅವ್ಯಾಹತವಾಗಿ ಮುಂದುವರಿದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಇವರಿಗೆ ಬೆನ್ನೆಲುಬಾಗಿ ಪೊಲೀಸರು ನಿಂತಿದ್ದಾರೆ.

ದೇವದುರ್ಗ, ರಾಯಚೂರು ತಾಲ್ಲೂಕಿನಲ್ಲಿ ಅಕ್ರಮ ಮರಳು ದಂದೆ ನಡೆಯುತ್ತಿದ್ದರೂ ಕೇಳುವವರಿಲ್ಲ. ಜಿಲ್ಲೆಯ ಹಿರಿಯ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರ ಬರುವುದಿಲ್ಲ. ಜನರು ಮೊಬೈಲ್‌ಗೆ ಕರೆ ಮಾಡಿ ತಿಳಿಸಲು ಪ್ರಯತ್ನಿಸಿದರೂ ಕರೆಗಳನ್ನು ಸ್ವೀಕರಿಸುವುದಿಲ್ಲ. ಇದು ಅಕ್ರಮ ದಂದೆಕೋರರಿಗೆ ವರವಾಗಿ ಪರಿಣಮಿಸಿದೆ.

ದೇವದುರ್ಗ ಹಾಗೂ ಸಿಂಧನೂರು ತಾಲ್ಲೂಕುಗಳಲ್ಲಿ ಆಟೊರಿಕ್ಷಾ, ಬುಲೆರೊ ಹಾಗೂ ಟಿಂಪೊ ಟ್ರ್ಯಾಕ್ಸ್‌ಗಳ ಮೇಲೆ ಕುಳಿತು ಪ್ರಯಾಣಿಸುತ್ತಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾಮೂಲು ಪಡೆದು ವಾಹನ ಚಾಲಕರಿಗೆ ಪರೋಕ್ಷ ಸಹಕಾರ ನೀಡುತ್ತಿದ್ದಾರೆ. ದೇವದುರ್ಗ ತಾಲ್ಲೂಕಿನಲ್ಲಿ ಪ್ರಯಾಣಿಕರ ಜೀವಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ. ಕುರಿಗಳಂತೆ ವಾಹನಗಳಲ್ಲಿ ತುಂಬಲಾಗುತ್ತಿದೆ. ಅಲ್ಲಿ ಕೇಳುವವರೇ ಇಲ್ಲ. ರಸ್ತೆ ಸುರಕ್ಷತಾ ಸಮಿತಿ ಇದ್ದರೂ ನಿಷ್ಕ್ರಿಯವಾಗಿದೆ. ಸಭೆಯು ಕಡತಗಳಲ್ಲಿ ದಾಖಲಿಸಲು ಮಾತ್ರ ಸೀಮಿತವಾಗಿದೆ.

* * *

ನೆಲಕಚ್ಚಿದ ಪ್ರವಾಸೋದ್ಯಮ

ಜಿಲ್ಲೆಯ ನಾಲ್ಕು ಐತಿಹಾಸಿಕ ಕೋಟೆಗಳಿದ್ದರೂ ಪ್ರವಾಸೋದ್ಯಮ ನೆಲ ಕಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ ಇಲಾಖೆ ಕೆಲ ಕಡೆ ನಾಮಫಲಕಗಳನ್ನು ಅಳವಡಿಸಿದ್ದನ್ನು ಬಿಟ್ಟರೆ ಬೇರೆನೂ ಅಭಿವೃದ್ಧಿ ಕೈಗೊಂಡಿಲ್ಲ.

ರಾಜ್ಯ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯ ಇಲಾಖೆಯನ್ನು ಗುಮಾಸ್ತರೇ ನಡೆಸಿದ್ದಾರೆ. ಕಲಬುರಗಿ ಕ್ಯೂರೆಟರ್‌ಗೆ ರಾಯಚೂರು ಜಿಲ್ಲೆಯ ಹೆಚ್ಚುವರಿ ಕಾರ್ಯಭಾರ ವಹಿಸಿಕೊಡಲಾಗಿದೆ. ಅವರಿಗೆ ಸರಿಯಾಗಿ ಟಿಎ, ಡಿಎ ದೊರಕದ ಕಾರಣ ಅವರು ಮೂರು ನಾಲ್ಕು ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ.

ಅಧಿಕಾರಿಗಳೇ ಇಲ್ಲದ ಕಾರಣ ಪ್ರವಾಸಿ ತಾಣಗಳು ನಿರ್ಲಕ್ಷ್ಯ ಹೆಚ್ಚಿದೆ. ಅತಿಕ್ರಮಣ ಅವ್ಯಾಹತವಾಗಿ ಮುಂದುವರಿದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಐತಿಹಾಸಿಕ ತಾಣಗಳ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಸರ್ಕಾರಿ ಜಾಗ ಅತಿಕ್ರಮಣ ಮಾಡುವುದು ಸುಲಭ ಎನ್ನುವಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಕೆಟ್ಟಿದೆ.

ಪ್ರಾದೇಶಿಕ ಅರಣ್ಯ ಇಲಾಖೆಯ ಸ್ಥಿತಿಯೂ ಹೀಗೆ ಇದೆ. ಸಾವಿರಾರು ಎಕರೆ ಜಮೀನು ಅತಿಕ್ರಮಣಕಾರರ ಪಾಲಾಗಿದೆ. ಅತಿಕ್ರಮಣ ಮಾಡಿರುವ ಪ್ರದೇಶದ ಪಟ್ಟಿಯನ್ನು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮೌನವಾಗಿದ್ದಾರೆ. ಅತಿಕ್ರಮಣ ತೆರವುಗೊಳಿಸಲು ಕಂದಾಯ ಇಲಾಖೆ ಅಧಿಕಾರಿಗಳೂ ಆಸಕ್ತಿ ತೋರಿಸುತ್ತಿಲ್ಲ‘ ಎಂದು

ಎಸ್‌ಎಫ್‌ಐ ಜಿಲ್ಲಾ ಘಟಕದ ರಮೇಶ ವೀರಾಪುರ ಬೇಸರ ವ್ಯಕ್ತಪಡಿಸುತ್ತಾರೆ.

ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣದ ಸಮೀಪ ಹಳೆಯ ಬಸ್ ಡಿಪೊ ಇದ್ದ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ನಗರ ಸಾರಿಗೆ ಬಸ್‌ ನಿಲ್ದಾಣದ ಕಟ್ಟಡ ಕಾಮಗಾರಿ ಮೂರು ವರ್ಷಗಳಿಂದ ತೆವಳುತ್ತ ಸಾಗಿದೆ
ಲಿಂಗಸುಗೂರು ತಾಲ್ಲೂಕಿನ ಮುದಗಲ್‌ನಲ್ಲಿ ಬಾಲಕಿಯರ ವಸತಿ ನಿಲಯದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ 
ಸಿಂಧನೂರಿನ ತಾಯಿ ಮಕ್ಕಳ ಆಸ್ಪತ್ರೆ ಮೂರು ವರ್ಷಗಳಿಂದ ಕಾಮಗಾರಿ ಅಪೂರ್ಣಗೊಂಡಿದೆ
ದೇವದುರ್ಗದಲ್ಲಿ ಖಾಸಗಿ ವಾಹನದ ಮೇಲೆ ಪ್ರಯಾಣಿಸುತ್ತಿರುವ ಪ್ರಯಾಣಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.