ADVERTISEMENT

ಮಸ್ಕಿ: ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 15:39 IST
Last Updated 15 ಜೂನ್ 2024, 15:39 IST
ಕುಡಿಯುವ ನೀರಿಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಶನಿವಾರ ಮಸ್ಕಿ ಕೆರೆಯ ನೀರು ತುಂಬಿಸುವ ಪೂರ್ವ ತಯಾರಿಯನ್ನು ಶಾಸಕ ಆರ್. ಬಸನಗೌಡ ಪರಿಶೀಲಿಸಿದರು
ಕುಡಿಯುವ ನೀರಿಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಶನಿವಾರ ಮಸ್ಕಿ ಕೆರೆಯ ನೀರು ತುಂಬಿಸುವ ಪೂರ್ವ ತಯಾರಿಯನ್ನು ಶಾಸಕ ಆರ್. ಬಸನಗೌಡ ಪರಿಶೀಲಿಸಿದರು   

ಮಸ್ಕಿ: ‘ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡಲಾಗಿದ್ದು ಭಾನುವಾರ ಸಂಜೆ ವೇಳೆ ಮೈಲ್ 69ಕ್ಕೆ ನೀರು ತಲುಪಲಿದೆ. ಅಧಿಕಾರಿಗಳು ಕೂಡಲೇ ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಆರ್. ಬಸನಗೌಡ ತುರುವಿಹಾಳ ಸೂಚಿಸಿದರು.

ಪಟ್ಟಣದ ಕುಡಿಯುವ ನೀರಿನ ಕೆರೆ ತುಂಬಿಸುವ ಪೂರ್ವ ಸಿದ್ಧತೆಗಳನ್ನು ಶನಿವಾರ ಪರಿಶೀಲಿಸಿದ ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕುಡಿಯುವ ನೀರಿನ ಉದ್ದೇಶಕ್ಕೆ ಕಾಲುವೆಗೆ ನೀರು ಬಿಡಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕೆರೆಗಳನ್ನು ಭರ್ತಿ ಮಾಡಿಸಬೇಕು. ನರೇಗಾದಡಿ ಸಾಧ್ಯವಾದರೆ ಹೊಸ ಪೈಪ್‌ಲೈನ್ , ಮೋಟರ್ ಅಳವಡಿಸಿ ನೀರು ತುಂಬಿಸುವಂತೆ ಪಿಡಿಒಗಳಿಗೆ ಸೂಚಿಸಬೇಕು, ತಾಲ್ಲೂಕು ಮಟ್ಟದ ಅಧಿಕಾರಿಗಳು ಕೆರೆಗಳ ಪರಿಶೀಲನೆ ಮಾಡಿ ವರದಿ ನೀಡಬೇಕು’ ಎಂದು ಸೂಚಿಸಿದರು.

‘ಮಸ್ಕಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಬಹಳ ಇದೆ. ಮುಖ್ಯ ಕಾಲುವೆಗೆ ಎಷ್ಟು ಪಂಪ್‌ಸೆಟ್ ಬಳಸಬೇಕೋ ಅಷ್ಟು ಬಳಸಿಕೊಂಡು ನೀರು ತುಂಬಿಸಿಕೊಳ್ಳಿ. ಕಾಲುವೆಗೆ ನೀರು ಬಿಟ್ಟಾಗ ಕೆರೆಗಳನ್ನು ಭರ್ತಿ ಮಾಡಿಕೊಳ್ಳಿದಿದ್ದರೆ ಅಧಿಕಾರಿಗಳೇ ಹೊಣೆ’ ಎಂದು ಎಚ್ಚರಿಸಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ತಹಶೀಲ್ದಾರ್ ಸುಧಾ ಅರಮನೆ, ತಾಲ್ಲೂಕು ಪಂಚಾಯಿತಿ ಇಒ ಉಮೇಶ, ನೀರಾವರಿ ನಿಗಮದ ಎಇಇ ದಾವುದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಿ ಜಾಗ ಒತ್ತುವರಿ, ಶಾಸಕ ಗರಂ: ಪಟ್ಟಣದ ನೀರಾವರಿ ನಿಗಮಕ್ಕೆ ಸೇರಿದ ಸರ್ವೇ ನಂಬರ್‌ಗಳಲ್ಲಿ ಒತ್ತುವರಿ ಮಾಡಿ ಬಡಾವಣೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ, ನೀವು ಅವುಗಳ ಎನ್‌ಎ ಮಾಡಲು ಹೇಗೆ ಅನುಮತಿ ನೀಡಿದ್ದೀರಿ ಎಂದು ಶಾಸಕ ಬಸನಗೌಡ ತುರುವಿಹಾಳ ಅವರು ತಹಶೀಲ್ದಾರ್ ಸುಧಾ ಅರಮನೆ ಅವರನ್ನು ಪ್ರಶ್ನಿಸಿದರು.

ಪಟ್ಟಣದಲ್ಲಿ ನೀರಾವರಿ ನಿಗಮಕ್ಕೆ ಸೇರಿದ ಸರ್ಕಾರಿ ಜಾಗ ಇದೆ. ತಾಲ್ಲೂಕಿಗೆ ಬೇಕಾದ ಕಚೇರಿ ಕಟ್ಟಡಕ್ಕೆ ಅನುಕೂಲವಾಗುತ್ತದೆ, ಕೂಡಲೇ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಾಗ ಬಂದೋಬಸ್ತ್ ಮಾಡಿಸಿ, ಇಲ್ಲದಿದ್ದರೆ ನಿಮ್ಮ ನೌಕರಿಗೆ ಕುತ್ತು ಬರುತ್ತದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.