ಮಾನ್ವಿ: ‘ನರೇಗಾ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಹಿರೇಕೊಟ್ನೆಕಲ್ ಗ್ರಾಮದ ಕೂಲಿಕಾರ್ಮಿಕರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿಯಲ್ಲಿ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಟಿಸಿ ಅಕ್ರಮ ಎಸಗಲಾಗುತ್ತಿದೆ. ಅರ್ಹ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಅವರು ಬೇರೆಯವರ ಮೂಲಕ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಲಿ ಕಾರ್ಮಿಕರ ಬೇಡಿಕೆಗಳ ಕುರಿತು ಸಹಾಯಕ ನಿರ್ದೇಶಕ ಖಾಲೀದ್ ಅಹ್ಮದ್, ಪಿಡಿಒ ನಾಗಭೂಷಣ ಅವರ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದರು.
ಜಿ.ಪಂ ಸಿಇಒ ಅವರ ಆಪ್ತ ಕಾರ್ಯದರ್ಶಿ ಅಬ್ದುಲ್ ವಾಹಿದ್ ಮನವಿ ಸ್ವೀಕರಿಸಿದರು.
ದಲಿತ ಸಂಘರ್ಷ ಸಮಿತಿ (ಭೀಮ ಶಕ್ತಿ) ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಜ್ ಕೊಡ್ಲಿ, ಶ್ಯಾಮ ಸಿಂಗ್, ರಮೇಶ ಉಪ್ಪಾರ, ಮೌನೇಶ ನಾಯಕ, ವೀರೇಶ ನಾಯಕ, ವಿನೋದಕುಮಾರ ಹಾಗೂ ಹಾಜಿಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.