ರಾಯಚೂರು: ಕಟ್ಟಡ ಕಾರ್ಮಿಕರೆಂದು ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡಿದ್ದಲ್ಲಿ, ಇಂಥವರು ಖುದ್ದಾಗಿ ತಮ್ಮ ವ್ಯಾಪ್ತಿಯ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ತೆರಳಿ ಮೂಲ ಗುರುತಿನ ಚೀಟಿಯನ್ನು ಹಿಂದಿರುಗಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಎಂ. ಬೇಲೂರೆ ಹೇಳಿದರು.
ಜಿಲ್ಲಾ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿರುವ ‘ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ ರದ್ದತಿ ಅಭಿಯಾನ’ ಆಟೋ ಪ್ರಚಾರಕ್ಕೆ ಇಲ್ಲಿನ ಜಿಲ್ಲಾ ಕೋರ್ಟ್ ಆವರಣದಲ್ಲಿ ಬುಧವಾರ ಹಸಿರುನಿಶಾನೆ ತೋರಿಸುವ ಪೂರ್ವ ಮಾತನಾಡಿದರು.
ಸದಸ್ಯತ್ವವನ್ನು ರದ್ದುಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಲಾಖೆಯ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನಕಲಿ ದಾಖಲೆ ಹಾಗೂ ಅನರ್ಹ ಕಾರ್ಮಿಕರು ಪಡೆದಿರುವ ಮಂಡಳಿಯ ಗುರುತಿನ ಚೀಟಿಯನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಈಗಾಗಲೇ ಮಂಡಳಿಯಿಂದ ಸೌಲಭ್ಯಗಳನ್ನು ಪಡೆದುಕೊಂಡಲ್ಲಿ ಅಂತಹ ಫಲಾನುಭವಿಗಳ ವಿರುದ್ದ ಕಾನೂನು ರೀತ್ಯಾ ಸಕ್ಷಮ ಪ್ರಾಧಿಕಾರದಲ್ಲಿ ಮೊಕದ್ದಮೆ ದಾಖಲಿಸುವ ಅವಕಾಶವೂ ಅವರಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಆರತಿ ಮಾತನಾಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಹಾಗೂ ಅನರ್ಹವಾದ ಕಾರ್ಮಿಕರು ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡಿರುವ ಕೆಲವೊಂದು ಪತ್ತೆಯಾಗಿವೆ. ಇದೀಗ ಖುದ್ದಾಗಿ ಗುರುತಿನ ಚೀಟಿ ಹಿಂತಿರುಗಿಸಲು ಅವಕಾಶ ಮಾಡಲಾಗಿದೆ ಎಂದು ಹೇಳಿದರು.
ಕಾರ್ಮಿಕ ಇಲಾಖೆಯ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.