ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಕೇಂದ್ರದಲ್ಲಿ ಡಿಸೆಂಬರ್ 10 ಮತ್ತು 11 ರಂದು ನಡೆಯುತ್ತಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ ವೀರಹನುಮಾನ ಅವರು ಸರ್ವಾಧ್ಯಕ್ಷರಾಗಿದ್ದಾರೆ. ತನಿಮಿತ್ತ ‘ಪ್ರಜಾವಾಣಿ‘ಗೆ ನೀಡಿದ ಸಂದರ್ಶನ ಇಲ್ಲಿದೆ.
* ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕುರಿತು?
– ತುಂಬಾ ಖುಷಿವಾಗಿದೆ. ಲಿಂಗಸುಗೂರಿನಲ್ಲಿ ಜಿಲ್ಲಾಮಟ್ಟದ ಸಮ್ಮೇಳನ ಮಾಡುವುದಕ್ಕೆ ನಾವೆಲ್ಲರೂ ಸೇರಿ ನಿರ್ಧಾರ ಮಾಡಿದ್ದೇವು. ನನ್ನನ್ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಯುವ ಕವಿಗಳು ಬಹಳ ಸಂತೋಷ ಪಡುತ್ತಿದ್ದಾರೆ. ಅವರ ಸಂತೋಷ ಕಂಡು ನನಗೂ ಸಂತೋಷವಾಗಿದೆ.
* ಜಿಲ್ಲೆಯ ಸಾಹಿತ್ಯದ ಬಗ್ಗೆ ನಿಮ್ಮ ಅನಿಸಿಕೆ
– ಇಡೀ ಜಿಲ್ಲೆಯ ಸಾಹಿತಿಗಳು ಪ್ರಗತಿಪರ ಚಿಂತನೆಯ ಸಾಹಿತ್ಯವನ್ನು ಬರೆಯುತ್ತಿದ್ದಾರೆ. ಸರಾಸರಿ ನಮ್ಮ ಜಿಲ್ಲೆಯಿಂದ ವರ್ಷಕ್ಕೆ 30 ಹೊಸ ಪುಸ್ತಕಗಳು ಹೊರಬರುತ್ತಿವೆ. ಬೇರೆ ಯಾವುದೇ ಜಿಲ್ಲೆಯಲ್ಲೂ ಈ ರೀತಿ ಕಾಣಲಾಗದು. ಕನ್ನಡದ ಗಜಲ್‌ಗಳು, ಕನ್ನಡದ ಹೈಕುಗಳು ಮತ್ತು ರುಬಾಯಿಗಳು, ಕಥೆಗಳು ಬಹಳ ಸಮೃದ್ಧಿಯಿಂದ ಬೆಳೆಯುತ್ತಿವೆ. ನವ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಕವಿಗಳಾಗಿದ್ದಾರೆ. ಅವರ ಸಾಹಿತ್ಯವನ್ನು ಒಂದು ಬಾರಿ ಅವಲೋಕನ ಮಾಡಿದರೆ, ಹಿಂದಿನ ಸಾಹಿತ್ಯಕ್ಕೂ ಇಂದಿನ ಸಾಹಿತ್ಯಕ್ಕೂ ಅಜಗಜ ಅಂತರ ಕಾಣುತ್ತದೆ. ಆದರೂ ಪ್ರಗತಿಪರ ಚಿಂತನೆ ಎದ್ದು ಕಾಣುತ್ತದೆ. ಬೇರೆ ಜಿಲ್ಲೆಯವರು ಹುಬ್ಬೇರಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಸಾಹಿತ್ಯ ರಚನೆ ಇದೆ.
* ನಿಮ್ಮ ಪ್ರಕಾರ ಸಾಹಿತ್ಯದ ವ್ಯಾಖ್ಯಾನ?
– ಸಂಸ್ಕೃತಿ, ಜೀವನ, ಬದುಕು ಜೊತೆಯಲ್ಲೇ ಸಾಹಿತ್ಯ ಇರುತ್ತದೆ. ಸಾಹಿತ್ಯ–ಬದುಕು ಬೇರೆಯಲ್ಲ, ಸಾಹಿತ್ಯ–ಹೋರಾಟ ಬೇರೆಯಲ್ಲ.
* ನೀವು ಬರೆದ ಸಾಹಿತ್ಯ ಕುರಿತು ಒಂದಿಷ್ಟು ಹೇಳಿ?
– ನನ್ನ ಸಾಹಿತ್ಯದಲ್ಲಿ ಮಹಿಳಾ ಚಿಂತನೆ ಬಹಳಷ್ಟಿದೆ. ದಲಿತ ಬಂಡಾಯದ ನಿಟ್ಟಿನಲ್ಲಿ ಒಂಭತ್ತು ಹೈಕುಗಳು ಬಂದಿವೆ. ಅದರಲ್ಲಿ ಪ್ರಕೃತಿ, ತತ್ವಶಾಸ್ತ್ರ ಎಲ್ಲವನ್ನು ಸೇರಿಸಿದ್ದೇನೆ. ಪ್ರಗತಿಪರ ಧೋರಣೆಯ ಹೈಕುಗಳನ್ನು, ಕವಿತೆಗಳನ್ನು ಕಥೆಗಳನ್ನು ಬರೆದಿದ್ದೇನೆ. ನನ್ನ ಎಂಟು ಕಥೆಗಳ ಪೈಕಿ ಒಂದು ಕಥೆಯು ದೂರದರ್ಶನದಲ್ಲಿ ಧಾರವಾಹಿಯಾಗಿ ಬಂದಿದೆ. ಮಹಿಳಾ ಚಿಂತನೆಯನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆಯನ್ನು ನಿರ್ದೇಶಕರೊಬ್ಬರು ಧಾರವಾಹಿ ಮಾಡಿದ್ದರು.
* ಈಗ ಯಾವ ಸಾಹಿತ್ಯ ಬರೆಯುತ್ತಿದ್ದೀರಿ?
– ನಾನೊಂದು ವಿಭಿನ್ನವಾದ ರೀತಿಯ ‘ರಾಮಾಯಣ‘ವನ್ನು ಬರೆಯುತ್ತಿದ್ದೇನೆ. ಮೂಲ ರಾಮಾಯಣದಲ್ಲಿ ಇಲ್ಲದ ಅಂಶಗಳನ್ನು ನನ್ನದೇ ದೃಷ್ಟಿಯಲ್ಲಿ ಬರೆಯುತ್ತಿದ್ದೇನೆ. ಆ ರಾಮಾಯಣದಲ್ಲಿ ಯಾವ ಅಂಶಗಳು ಇರಬೇಕಾಗಿತ್ತು? ಏಕೆ ಇಲ್ಲ? ಎನ್ನುವ ಪ್ರಶ್ನೆಗಳನ್ನಿಟ್ಟುಕೊಂಡು ರಾಮಾಯಣ ಬರೆಯುತ್ತಿದ್ದೇನೆ.
* ಯುವ ಸಾಹಿತಿಗಳಿಗೆ ನಿಮ್ಮ ಸಲಹೆ?
–ಮೊದಲಿನಿಂದಲೂ ನಾನು ಯುವ ಸಾಹಿತಿಗಳಿಗೆ ಕಾರ್ಯಾಗಾರಗಳನ್ನು ಮಾಡುತ್ತಾ ಬಂದಿದ್ದೇನೆ. ಮೊಟ್ಟಮೊದಲು ಹೇಳುವುದು, ಅಧ್ಯಯನ ಮಾಡಿ ಸಾಹಿತ್ಯ ರಚಿಸಬೇಕು ಎನ್ನುವುದು. ಅಧ್ಯಯನ ಮಾಡದೇ ‘ಹೋದ ರಾಮ.. ಬಂದ ರಾಮ’ ಎಂದು ಬರೆದರೆ ಸಾಹಿತ್ಯ ಆಗುವುದಿಲ್ಲ. ಭರ್ತೃಹರಿ ಋಷಿಯು ಹೇಳುವಂತೆ ‘ಸುಕವೀತಾ ಯದ್ಯಸ್ತಿ ರಾಜ್ಯನ ಕಿಮ್’ ಎನ್ನುತ್ತಾನೆ. ಇದರರ್ಥ ಒಂದು ಒಳ್ಳೆಯ ಕವಿತೆ ಇದ್ರೆ..ರಾಜನ ಅಗತ್ಯ ಇರುವುದಿಲ್ಲ. ಯಾವುದೇ ಕವಿತೆ, ಸಾಹಿತ್ಯಕ್ಕೆ ಅಷ್ಟೊಂದು ದೊಡ್ಡ ಮಹತ್ವ ಇದೆ. ಆ ನಿಟ್ಟಿನಲ್ಲಿ ಅಧ್ಯಯನಶೀಲರಾಗಿ ತಮ್ಮದೇ ಆದ ಸಾಹಿತ್ಯ ರಚಿಸಬೇಕು ಎಂಬುದು ನನ್ನ ಸಲಹೆ.
ಮೊದಲಿನಿಂದಲೂ ಯುವಕವಿಗಳಿಗೆ ಸಲಹೆ ನೀಡುವುದರ ಜೊತೆಗೆ ನನ್ನ ಬಳಿ ಬಂದವರಿಗೆ ನನ್ನದೇ ದೃಷ್ಟಿಯಲ್ಲಿ ಸಾಹಿತ್ಯದ ಪರಿಕಲ್ಪನೆ ತಿಳಿಸಿಕೊಡುತ್ತಾ ಬಂದಿದ್ದೇನೆ. ಸುಮಾರು 20 ಕವಿಗಳು ನನ್ನಿಂದಲೇ ಪ್ರೇರಿತರಾಗಿದ್ದಾರೆ ಎಂಬುದು ನನ್ನ ಅನಿಸಿಕೆ.
* ಜಿಲ್ಲೆಯವರು ರಚಿಸಿದ ಸಾಹಿತ್ಯ ಗಡಿಯಾಚೆ ಹೋಗಿದೆಯೇ?
– ಸಾಹಿತಿಗಳಾದ ಚಿದಾನಂದ ಸಾಲಿ, ಆರೀಫ್ ರಾಜಾ ಹಾಗೂ ನನ್ನ ಸಾಹಿತ್ಯವು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿವೆ. ಆದರೆ ಎಷ್ಟು ಸ್ಕೋಪ್ ಸಿಗಬೇಕಿತ್ತೊ ಅಷ್ಟು ಸಿಗುತ್ತಿಲ್ಲ. ಈ ಭಾಗದ ಬಗ್ಗೆ ಸ್ವಲ್ಪ ಕಡಗಣನೆ ಇದ್ದೇ ಇದೆ. ರಾಯಚೂರಿನಲ್ಲಿ 2016 ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯದೆಲ್ಲೆಡೆ ಗಮನ ಸೆಳೆಯಲೇ ಇಲ್ಲ. ಹಳೇ ಮೈಸೂರಿನ ಭಾಗದವರು ಈ ಭಾಗವನ್ನು ತಿರಸ್ಕಾರದಿಂದ ನೋಡುತ್ತಾರೆ. ಆ ನೋಟ ಸರಿಯಿಲ್ಲ. ಸಾಹಿತ್ಯಿಕವಾಗಿ ರಾಯಚೂರು ಬೆಳೆಯುತ್ತಿದೆ ಎನ್ನುವುದು ಅವರಿಗೂ ಗೊತ್ತಾಗಿದೆ. ಕೆಲವರು ಅನ್ಯ ದೃಷ್ಟಿಕೋನದಿಂದ ನೋಡುವವರಿದ್ದಾರೆ. ಇನ್ನೂ ಕೆಲವರು ತುಂಬಾ ಆಸಕ್ತಿಯಿಂದ ನಮ್ಮ ಸಾಹಿತ್ಯವನ್ನು ಕೇಳಿ ತಿಳಿದುಕೊಳ್ಳುತ್ತಾರೆ.
* ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ನಿಮ್ಮ ಅಭಿಪ್ರಾಯ ಏನು?
– ನಾನು ಮೂಲತಃ ಹೋರಾಟಗಳಿಂದ ಬೆಳೆದು ಬಂದಿದ್ದೇನೆ. ಅಭಿವೃದ್ಧಿ ವಿಷಯಗಳನ್ನಿಟ್ಟುಕೊಂಡು ಅನೇಕ ಹೋರಾಟಗಳನ್ನು ಮಾಡಿದ್ದೇವೆ. ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಸರ್ಕಾರದಲ್ಲಿ ಸಾಕಷ್ಟು ಹಣಕಾಸು ಇದ್ದರೂ ನಮ್ಮ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪಂದಿಸುವುದಿಲ್ಲ. ಉದಾ: ರಾಯಚೂರು ವಿಶ್ವವಿದ್ಯಾಲಯ ಹೊಸದಾಗಿ ಸ್ಥಾಪನೆಯಾಗಿದ್ದು, ಅದಕ್ಕೆ ಸರಿಯಾದ ಆರ್ಥಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲ ಕೊಡುತ್ತಿಲ್ಲ. ಅನೇಕ ಹುದ್ದೆಗಳು ಖಾಲಿ ಇದ್ದು, ಶೈಕ್ಷಣಿಕ ಅಭಿವೃದ್ಧಿಯಲ್ಲಿ ಜಿಲ್ಲೆ ಹಿಂದುಳಿಯುವುದಕ್ಕೆ ಇದು ಕಾರಣವಾಗುತ್ತದೆ. ಒಟ್ಟಾರೆ ಜನಪ್ರತಿನಿಧಿಗಳಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸರಿಯಾದ ತಿಳಿವಳಿಕೆ ಇಲ್ಲ. ಇದರ ಅರ್ಥ ಇಷ್ಟೆ, ಅಭಿವೃದ್ಧಿ ಮಾಡಲೇಬೇಕು ಎನ್ನುವ ಛಲ ಜನಪ್ರತಿನಿಧಿಗಳಲ್ಲಿ ಇಲ್ಲ.
ಏಮ್ಸ್ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಆದರೆ ರಾಜಕಾರಣಿಗಳು ಸರಿಯಾದ ಕಾಳಜಿ ತೋರಿಸುತ್ತಿಲ್ಲ ಎನ್ನುವ ಮನೋಭಾವ ಜನರಲ್ಲೇ ಬಂದಿದೆ. ಜಿಲ್ಲೆಯಲ್ಲಿ ಎರಡು ನದಿಗಳಿವೆ, ಚಿನ್ನವಿದೆ, ಭತ್ತದ ಬೆಳೆ ಇದೆ, ಹತ್ತಿ ಇದೆ. ಎಲ್ಲವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದರೆ ಜಿಲ್ಲೆಯು ಎಲ್ಲ ವಿಷಯಗಳಲ್ಲೂ ಅಭಿವೃದ್ಧಿಯಾಗುತ್ತದೆ.
ಭೂಗರ್ಭಶಾಸ್ತ್ರಜ್ಞರು ಹೇಳುವ ಪ್ರಕಾರ, ಜಿಲ್ಲೆಯಲ್ಲಿ ಹಟ್ಟಿ ಚಿನ್ನದ ಗಣಿ ನಿಕ್ಷೇಪದ ರೀತಿಯಲ್ಲೇ ಇನ್ನೂ ಸಾಕಷ್ಟು ಚಿನ್ನದ ನಿಕ್ಷೇಪವಿದೆ. ಇಡೀ ದೇಶದಲ್ಲಿರುವುದು ಚಿನ್ನದ ಒಂದೇ ಒಂದು ಗಣಿ, ಅದು ಹಟ್ಟಿಚಿನ್ನದ ಗಣಿ. ಸರ್ಕಾರವು ಸಂಶೋಧನೆ ಮಾಡಿ ಕಾಯಕಲ್ಪ ನೀಡಿದರೆ ಇನ್ನೂ ಎರಡು ಗಣಿಗಳನ್ನು ಆರಂಭಿಸಿ, ಈ ಭಾಗದ ನೂರಾರು ಜನರಿಗೆ ಉದ್ಯೋಗ ಕೊಡಬಹುದಾಗಿದೆ.
ಕಿರು ಪರಿಚಯ
ಮೂಲ ರಾಯಚೂರು ನಿವಾಸಿ ವೀರಹನುಮಾನ ಅವರು 1955 ರಲ್ಲಿ ಜನಿಸಿದ್ದು, ಬಿಎ ಕಾನೂನು ಪದವಿ ಓದಿದ್ದಾರೆ.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಮನೆತನದ ವೃತ್ತಿಯಾದ ಕಟ್ಟಡ ನಿರ್ಮಾಣ (ವಾಸ್ತುಶಿಲ್ಪದಲ್ಲಿ ಪರಿಣಿತಿ) ಅನೇಕ ಕಟ್ಟಡಗಳ ನಕಾಶೆ ರಚನೆ, ಪರೀವಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 35 ವರ್ಷಗಳಿಂದ ಕಸಾಪ ಒಡನಾಡಿ.
ಎಸ್‌ಎಫ್ಐ ಮತ್ತು ಡಿವೈಎಫ್‌ಐ, ಸಮುದಾಯದಲ್ಲಿ ಸಕ್ರಿಯರಾಗಿದ್ದರು. ಅನೇಕ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸದ್ಯ ರಾಯಚೂರಿನ ಐತಿಹಾಸಿಕ ಕೊಟೆಗಳ ಸಂರಕ್ಷಣೆ ಮತ್ತು ಅಧ್ಯಯನ ಸಮಿತಿಯ ನಿರ್ದೇಶಕರಾಗಿದ್ದಾರೆ.
23 ಕೃತಿಗಳನ್ನು ರಚಿಸಿದ್ದಾರೆ. 11 ಸಂಪಾದಿತ ಕೃತಿಗಳನ್ನು ಹೊರತಂದಿದ್ದಾರೆ. ಎಂಟು ಕಥೆಗಳನ್ನು ಬರೆದಿದ್ದಾರೆ. ಸಾಕಷ್ಟು ಬಿಡಿ ಲೇಖನಗಳನ್ನು ಬರೆದಿದ್ದು, ಅನೇಕ ಕಡೆಗಳಲ್ಲಿ ಉಪನ್ಯಾಸ ನೀಡಿದ್ದಾರೆ.
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ, ಮಹಾಂತ ಪ್ರಿಯ ಪ್ರಶಸ್ತಿ, ವಿಜಯೀಂದ್ರ ಅನುಗ್ರಹ ಪ್ರಶಸ್ತಿ (ಕುಂಭಕೋಣಂ), ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಧಮ್ಮಪದ ಗ್ರಂಥಕ್ಕೆ ಗುಲಬರ್ಗಾ ವಿ.ವಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.