ಲಿಂಗಸುಗೂರು: ‘ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸಬೇಕೆನ್ನುವ ಪ್ರತಿನಿಧಿಗಳು ಹೆಲಿಕಾಪ್ಟರ್ ತಿರುಗಾಟ ಬಿಟ್ಟು ಜನರ ಮಧ್ಯೆ ಇರುವುದನ್ನು ಕಲಿಯಬೇಕು. ಎಲ್ಲಿಯೋ ಕುಳಿತು ರಾಜಕೀಯಕ್ಕಾಗಿ ಅಧಿಕಾರಿಗಳ ಮುಂದೆ ಅಧಿಕಾರ ಪ್ರದರ್ಶನ ಮಾಡುವುದರಿಂದ ಅಭಿವೃದ‍್ದಿ ಕಾಣುವುದಿಲ್ಲ’ ಎಂದು ಮಾಜಿಕ ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಕೃಷ್ಣಾ ಭಾಗ್ಯ ಜಲ ನಿಗಮದಡಿ ಅನುಷ್ಠಾನಗೊಂಡ ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ, ನಂದವಾಡಗಿ ಏತ ನೀರಾವರಿ ಯೋಜನೆಗಳ ಸ್ಥಿತಿ ಗತಿ ಕುರಿತು ಯಾರೊಬ್ಬರು ಕಾಲುವೆಗಳ ಮೇಲೆ ಹೋಗುತ್ತಿಲ್ಲ. ಎಲ್ಲೊ ಕುಳಿತು ಕೆರೆ ಭರ್ತಿ ಮಾಡಬೇಕು, ರೈತರಿಗೆ ಸಮಪರ್ಕ ನೀರು ಹರಿಸಬೇಕು ಎಂದು ಹೇಳಿಕೆಯಿಂದ ನ್ಯಾಯ ಸಿಗುವುದಿಲ್ಲ’ ಎಂದು ಕುಟಿಕಿದರು.
‘ನೀರಾವರಿ ಯೋಜನೆಗಳ ಅನುಷ್ಠಾನ ಅಸಮರ್ಪಕವಾಗಿ ನಡೆದಿವೆ. ನಂದವಾಡಗಿ ಯೋಜನೆ ಜನಮಾನಸದಿಂದ ಅಳಿಸಿ ಹೋಗಿದೆ. ರಾಂಪೂರ ಏತ ನೀರಾವರಿ ಯೋಜನೆ ಭಾಗಶಃ ಕಾಲುವೆಗಳು ಕುಸಿತಗೊಂಡಿವೆ. ಸ್ಕಿಂ “ಬಿ” ದ ಯೋಜನೆ ಕೋಟ್ಯಂತರ ಹಣ ಖರ್ಚಾದರು ನೀರು ಹರಿಯುತ್ತಿಲ್ಲ. ನಾರಾಯಣಪುರ ಬಲದಂಡೆ ಆಧುನೀಕರಣ ಕಾಮಗಾರಿ ಸೇರಿದಂತೆ ಎಲ್ಲವೂ ಗುತ್ತಿಗೆದಾರರಿಗೆ ಕಾಮಧೇನುವಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕೆರೆಗಳಿಗೆ ನೀರು ಭರ್ತಿ ಮಾಡುವ ಕುರಿತು ಬೆಟ್ಟದ ಮೇಲೆ ಕುಳಿತು (ಆಲಮಟ್ಟಿ) ಸಭೆ ನಡೆಸಿದರೆ ಸಾಧ್ಯವಾಗದು. ಆ ಕುರಿತು ನೀಲ ನಕ್ಷೆಯೆ ಸಿದ್ಧಗೊಂಡಿಲ್ಲ. ರೈತರ ಜಮೀನಿಗೆ ಸಮರ್ಪಕ ನೀರು ಹರಿಸಲು ಹೇಳುತ್ತೇವೆ ವಾಸ್ತವವಾಗಿ ನಾಲೆಗಳ ಮೇಲೆ ಹೋಗಿ ಏನಾಗಿದೆ ಎಂದು ನೋಡಿದ್ದೇವೆಯೆ ಎಂದು ಶಾಸಕ ಡಿ.ಎಸ್ ಹೂಲಗೇರಿ, ಕೊಪ್ಪಳ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು'
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ. ಮುಖಂಡರಾದ ಎಂ.ಡಿ ರಫಿ, ಕಂಠೆಪ್ಪಗೌಡ ಖೈರವಾಡಗಿ, ಬಾಬಾಖಾಜಿ, ಸಂಜೀವಕುಮಾರ ಚಲುವಾದಿ, ಸಂಜೀವಕುಮಾರ ಕಂದಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.