ದೇವದುರ್ಗ: ತಾಲ್ಲೂಕು ಕೇಂದ್ರ ಹಾಗೂ ಸುತ್ತಲಿನ 40 ಗ್ರಾಮಗಳ ಜನರ ಆರೋಗ್ಯಕ್ಕೆ ಆಸರೆಯಾಗಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊದಲಿನಿಂದಲೂ ವೈದ್ಯರ ಕೊರತೆ ಇದ್ದು, ಲಭ್ಯ ಇರುವ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಈಗ ಕೊರೊನಾ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸದ್ಯ ಆರು ವೈದ್ಯಾಧಿಕಾರಿಗಳು ಮತ್ತು 83 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ವೈರಸ್ ಭೀತಿ ಎದುರಾಗಿರುವುದರಿಂದ ಅದಕ್ಕಾಗಿಯೇ ಮುಂಜಾಗೃತವಾಗಿ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 100 ಹಾಸಿಗೆ ಇರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾಗಾಗಿ 6 ಜನ ತಜ್ಞ ವೈದ್ಯರು ಮತ್ತು 38 ಜನ ಸಿಬ್ಬಂದಿಯನ್ನು ಮೀಸಲಿಡಲಾಗಿದೆ.
3 ಐಸಿಯು ಕೋಣೆ ಸೇರಿದಂತೆ 6 ಕೋಣೆಗಳು, ಒಂದು ವೆಂಟಿಲೇಟರ್ ಹಾಗೂ 28 ಆಕ್ಸಿಜನ್ ಮತ್ತು 11 ವೈಯಕ್ತಿಕ ಕಾಳಜಿಯ ಕಿಟ್‌ಗಳನ್ನು ಮೀಸಲಿಡಲಾಗಿದೆ. ಮುಂಜಾಗೃತಾ ಕ್ರಮಕ್ಕಾಗಿ ಈಗಾಗಲೇ 1200 ವಿವಿಧ ಮಾಸ್ಕಗಳನ್ನು ವೈದ್ಯರು, ಸಿಬ್ಬಂದಿ ಮತ್ತು ಪ್ರಮುಖ ವ್ಯಕ್ತಿಗಳಿಗೆ ವಿತರಣೆ ಮಾಡಲಾಗಿದೆ.
ಕಳೆದ ಮಾರ್ಚ್ 23ರಿಂದ ಇಲ್ಲಿವರೆಗೂ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ತಾಲ್ಲೂಕಿಗೆ ಸುಮಾರು 12 ಸಾವಿರ ಜನರು ವಾಪಸ್ ಬಂದಿದ್ದಾರೆ. ಅವರೆಲ್ಲರಿಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಾಲಹಳ್ಳಿ, ಅರಕೇರಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಮತ್ತು ತಾಲ್ಲೂಕಿನಲ್ಲಿ ಆರಂಭಿಸಿರುವ ಮೂರು ಚೆಕ್ ಪೋಸ್ಟ್‌ಗಳಲ್ಲಿಯೂ ಇದುವರಿಗೂ 10ಸಾವಿರ ಜನರನ್ನು ಪರೀಕ್ಷಿಸಲಾಗಿದೆ.
ವಸತಿ ನಿಲಯ ವಶಕ್ಕೆ: ತಾಲ್ಲೂಕಿನ ಹೂವಿನಹೆಡ್ಗಿ, ಗೂಗಲ್ ಮತ್ತು ತಿಂಥಿಣಿ ಬ್ರಿಡ್ಜ್ ಗಡಿಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಿ ಜನರನ್ನು ತಪಾಸಣೆ ಮಾಡಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿನ ಎಜುಕೇಷನ್ ಲೇಔಟ್‌ಲ್ಲಿ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯ, ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳನ್ನು ಕೊರೊನಾಗಾಗಿ ತಾಲ್ಲೂಕು ಆಡಳಿತದ ವಶಕ್ಕೆ ಪಡೆಯಲಾಗಿದೆ. ಇವುಗಳಲ್ಲಿ ಒಟ್ಟು 235 ಹಾಸಿಗೆಗಳನ್ನು ಮುಂಜಾಗೃತವಾಗಿ ಕ್ವಾರೈಂಟೈನ್‌ಗಾಗಿ ಮೀಸಲಿಡಲಾಗಿದೆ ಎಂದು ಡಾ. ಬನದೇಶ್ವರ ತಿಳಿಸಿದರು.
ಟ್ರಾವೆಲ್ ಹಿಸ್ಟರಿ: ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದವರ ಮನೆಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹಸಿರು ಚೀಟಿಯನ್ನು ಅಂಟಿಸುವ ಕಾರ್ಯ ಮಾಡಲಾಗಿದೆ. ಅವರಿಂದ ‘ಟ್ರಾವೆಲ್ ಹಿಸ್ಟರಿ’ ಪಡೆಯಲಾತ್ತಿದೆ.
ವಿಶೇಷ ತಪಾಸಣೆ ಘಟಕ: ದೇವದುರ್ಗ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜಾಲಹಳ್ಳಿ ಮತ್ತು ಅರಕೇರಾ ಸಮುದಾಯ ಆರೋಗ್ಯ ಕೇಂದ್ರಗಳನ್ನು ವಿಶೇಷ ತಪಾಸಣೆ ಘಟಕಗಳನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರತಿ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮನೆಯಲ್ಲಿರು ಜನರಿಗೆ ಜ್ವರ, ಕೆಮ್ಮು ಮತ್ತು ನಗಡಿ ಸೇರಿದಂತೆ ಇತರ ಆರೋಗ್ಯ ಮಾಹಿತಿ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.